Advertisement

ನದಿಗೆ ಹೆಚ್ಚುವರಿ ನೀರು ಬಿಡುಗಡೆ

11:08 AM Aug 11, 2019 | Team Udayavani |

ಹೊಸಪೇಟೆ: ತ್ರಿವಳಿ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಶನಿವಾರ ಜಲಾಶಯದಿಂದ 22 ಕ್ರಸ್ಟ್‌ಗೇಟ್‌ಗಳ ಮೂಲಕ 52 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿದೆ. ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ.ನಾಗಮೋಹನ್‌ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಕ್ರಸ್ಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಟ್ಟರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಪ್ರವಾಹ ಹಾಗೂ ಜನ-ಜಾನುವಾರುಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಒಂದೇ ಬಾರಿಗೆ ಅಧಿಕ ನೀರನ್ನು ಬಿಡುವುದರ ಬದಲಿಗೆ ಹಂತಹಂತವಾಗಿ ಅಧಿಕ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೊದಲಿಗೆ 25 ಸಾವಿರ ಕ್ಯೂಸೆಕ್‌ ಬಿಡಲಾಗುತ್ತಿದ್ದು, ನಂತರ ಹಂತಹಂತವಾಗಿ ಅಧಿಕ ನೀರನ್ನು ನದಿಗೆ ಹರಿಸಲಾಗುವುದು. ನದಿಪಾತ್ರದಲ್ಲಿ ಬರುವ ಗ್ರಾಮಗಳ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಮನವಿ ಮಾಡಿದರು.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಎಡಬಿಡದೇ ಸುರಿಯುತ್ತಿರುವ ಪರಿಣಾಮ ಶಿವಮೊಗ್ಗ ಜಿಲ್ಲೆಯ ತುಂಗ ಹಾಗೂ ಭದ್ರಾ ಜಲಾಶಯಗಳು ಎರಡೂ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ 2.10ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿ ಬಿಡಲಾಯಿತು. ಸದ್ಯ 25 ಸಾವಿರ ಕ್ಯೂಸೆಕ್‌ ನದಿಗೆ ಹರಿಬಿಡಲಾಗಿದೆ. ಅದನ್ನು 50 ಸಾವಿರ ಕ್ಯೂಸೆಕ್‌ಗೆ ಏರಿಸಲಾಗುತ್ತದೆ. ನಂತರ ಹಂತಹಂತವಾಗಿ 1ಲಕ್ಷ ಕ್ಯೂಸೆಕ್‌ ಆಧಿಕ ನೀರು ನದಿಗೆ ಹರಿಸಲು ಮಂಡಳಿ ಮುಂದಾಗಿದೆ.

ತಡರಾತ್ರಿ ಹೆಚ್ಚು ನೀರು: ತುಂಗಾಭದ್ರಾ ಜಲಾಶಯದಿಂದ ಶನಿವಾರ ತಡರಾತ್ರಿ ಅಥವಾ ಭಾನುವಾರ ಬೆಳಗಿನ ಜಾವ 1.25ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಹೊಸಪೇಟೆ, ಕಂಪ್ಲಿ, ಕುರುಗೋಡು ಮತ್ತು ಸಿರುಗುಪ್ಪ ತಾಲೂಕು ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next