ಪಿ.ಸತ್ಯನಾರಾಯಣ
ಹೊಸಪೇಟೆ: ಚರಂಡಿ ಸ್ವಚ್ಛ ಮಾಡದೇ ಪರಿಣಾಮ ನಗರದ 21 ನೇ ವಾರ್ಡ್ ಜಗಳಿಕಟ್ಟೆ ಪ್ರದೇಶದಲ್ಲಿ ಚರಂಡಿ ಗಲೀಜು ನೀರು ಮನೆಗಳಿಗೆ ನುಗ್ಗಿ ಬಾರಿ ಅವಾಂತರ ಸೃಷ್ಟಿ ಮಾಡಿದ್ದು, ಇಲ್ಲಿನ ಜನರು ಪರದಾಡುತ್ತಿದ್ದಾರೆ.
ಚರಂಡಿಯಲ್ಲಿ ತ್ಯಾಜ್ಯ ತುಂಬಿ ಹೊಲಸು ನೀರು ಮುಂದೆ ಹರಿದು ಹೋಗದಂತಾಗಿ ಇಲ್ಲಿನ ತಗ್ಗು ಪ್ರದೇಶದ ಹತ್ತಾರು ಮನೆಗಳಿಗೆ ನುಗ್ಗಿದೆ. ಈ ನಡುವೆ ಕುಡಿಯುವ ನೀರಿನ ಪೈಪ್‌ನಲ್ಲಿ ಚರಂಡಿ ನೀರು ಮಿಶ್ರಣಗೊಂಡು, ಕಲುಷಿತ ಸೇವನೆ ಮಾಡುವಂತಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳಿಗೆ ಮೌಖೀಕವಾಗಿ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ. ಕಳೆದ ಆರು ತಿಂಗಳು ಇಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದ್ದು, ನಗರಸಭೆ ಸಿಬ್ಬಂದಿ ಸ್ವಚ್ಛತೆ ಮಾಡದೇ ಇರುವುದರಿಂದ ವಿಧಿಯಿಲ್ಲದೇ ನಿವಾಸಿಗಳೇ ಚರಂಡಿ ತ್ಯಾಜ್ಯ ಹೊರ ತೆಗೆಯುತ್ತಿದ್ದಾರೆ.
ಕಲುಷಿತ ನೀರು ಸೇವನೆ, ನುಗ್ಗಿ ಬರುವ ಚರಂಡಿ ನೀರು, ಸೊಳ್ಳೆಗಳ ಕಾಟಕ್ಕೆ ಜನರು ನರಕ ಕಂಡಿದ್ದಾರೆ. ಪ್ರಸ್ತುತ ನಗರಸಭೆ ಸದಸ್ಯರ ಅಧಿಕಾರ ಅವಧಿ ಪೂರ್ಣಗೊಂಡಿದೆ. ಒಂದೆಡೆ ವಾರ್ಡ್ ಸದಸ್ಯರು ಇಲ್ಲ, ಮತ್ತೂಂದೆಡೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಮತ್ತೆ ನಮ್ಮ ಗೋಳು ಕೇಳುವವರು ಯಾರು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ನಗರಸಭೆ ಸಿಬ್ಬಂದಿ ದಾರಿ ನೋಡುತ್ತಾ ಕುಳಿತರೆ ಸಮಸ್ಯೆ ಇನ್ನಷ್ಟು ಜಟಿಲವಾಗುವಬಹುದು ಎಂಬ ಹಿನ್ನೆಲೆಯಲ್ಲಿ ಖುದ್ದು ತಾವೇ ಚರಂಡಿಯಲ್ಲಿ ತುಂಬಿ ಕಸಕಡ್ಡಿ-ತ್ಯಾಜ್ಯವನ್ನು ಹೊರ ತೆಗೆಯುತ್ತಿದ್ದಾರೆ. ಇತ್ತೀಚೆಗೆ ವಾರ್ಡ್‌ನಲ್ಲಿ ನಡೆಸಿದ ಅವೈಜ್ಞಾನಿಕ ಸಿ.ಸಿ ರಸ್ತೆ ಕಾಮಗಾರಿಯಿಂದ ಮನೆಗಳಿಗೆ ಹೆಚ್ಚು ನೀರು ಬಂದು ಸೇರಿದೆ ಎಂದು ಜನಆಕ್ರೋಶ ವ್ಯಕ್ತಪಡಿಸಿದ್ದಾರೆ.