Advertisement

ಕಮಲಾಪುರವನ್ನು ಮಾದರಿ ಪಟ್ಟಣವನ್ನಾಗಿ ರೂಪಿಸಿ

04:14 PM Jun 17, 2019 | Naveen |

ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿಯ ಕೂಗಳತೆ ದೂರದಲ್ಲಿರುವ ಐತಿಹಾಸಿಕ ಕಮಲಾಪುರವನ್ನು ಮಾದರಿ ಪಟ್ಟಣವನ್ನಾಗಿ ರೂಪಿಸಲು ನೂತನ ಪಟ್ಟಣ ಪಂಚಾಯ್ತಿ ಸದಸ್ಯರು ಶ್ರಮವಹಿಸಬೇಕು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಸಲಹೆ ನೀಡಿದರು.

Advertisement

ನಗರದ ಶಾಸಕ ಆನಂದ ಸಿಂಗ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಮಲಾಪುರ ಪಟ್ಟಣ ಪಂಚಾಯಿತಿ ನೂತನ ಕಾಂಗ್ರೆಸ್‌ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಂಪಿಗೆ ಭೇಟಿ ನೀಡುವ ದೇಶ-ವಿದೇಶ ಪ್ರವಾಸಿಗರು, ಕಮಲಾಪುರ ಮೂಲಕ ಹಾದುಹೋಗುವುದರಿಂದ ಇಲ್ಲಿನ ವಸತಿ ಸಮಸ್ಯೆ, ಕುಡಿಯುವ ನೀರು, ರಸ್ತೆ, ಮಹಿಳೆಯರ ಸ್ನಾನಗೃಹದ ಸಮಸ್ಯೆ ಕಾಡುತ್ತಿದ್ದು, ನೂತನ ಕಮಲಾಪುರ ಪಟ್ಟಣ ಪಂಚಾಯ್ತಿಗೆ ಆಯ್ಕೆಯಾಗಿರುವ 17 ಜನ ನೂತನ ಸದಸ್ಯರು, ಆ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಅಸ್ಥಿರತೆ ಕಾಡುತ್ತಿದೆ. ಕಾರಣ ಪಕ್ಷ ನಿಷ್ಠೆ ಮರೆತಿರುವುದು. ಗ್ರಾ.ಪಂ, ತಾ.ಪಂ, ಜಿ.ಪಂ, ಶಾಸಕರು ಗೆದ್ದ ಕೂಡಲೇ ಪಕ್ಷಾಂತರ ಮಾಡುತ್ತಿದ್ದಾರೆ. ಪಕ್ಷ ದ್ರೋಹ ಮಾಡಬೇಡಿ. ಅಂತಹವರಿಗೆ ಹಂಪಿ ವಿರೂಪಾಕ್ಷೇಶ್ವರ ಬುದ್ಧಿ ಕಲಿಸುತ್ತಾನೆ ಎಂದರು.

ಮೋದಿ ಅವರು ದೇವಸ್ಥಾನಕ್ಕೆ ತೆರಳಿ ತುಲಾಭಾರ ಮಾಡಿಸಿಕೊಳ್ಳುವುದರಿಂದ ಅಭಿವೃದ್ಧಿ ಆಗುವುದಿಲ್ಲ. ತುಂಗಭದ್ರಾ ಜಲಾಶಯ 33 ಅಡಿಯಷ್ಟು ಹೂಳು ತುಂಬಿದೆ. ಇದರಿಂದ ನೀರಿನ ಶೇಖರಣೆ ಕುಸಿದಿದೆ. ಜಲಾಶವಿದ್ದರೂ ಸಹ ಬಳ್ಳಾರಿಯಲ್ಲಿ 15 ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತಿದೆ. ಹೊಳೆತ್ತುವುದಕ್ಕೆ 12,500 ಕೋಟಿ ಹಾಗೂ ಹೂಳನ್ನು ಹಾಕಲು 65 ಸಾವಿರ ಎಕರೆ ಬೇಕಾಗುತ್ತದೆ. ಅದೇ, ಸಮಾನಂತರ ಜಲಾಶಯ ನಿರ್ಮಾಣ ಮಾಡುವುದಕ್ಕೆ 9 ಸಾವಿರ ಕೋಟಿ ಬೇಕಾಗುತ್ತದೆ. ಕಳೆದ ವರ್ಷ 193 ಟಿಎಂಸಿ ನೀರು ಹರಿದು ಹೋಗಿದೆ. ಜಲಾಶಯದ ಉಳಿವಿಗೆ ಕೇಂದ್ರ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಕೇಂದ್ರ ಸರಕಾರ ತುಂಗಭದ್ರಾ ಜಲಾಶಯದ ಮಂಡಳಿಯ ಅಧ್ಯಕ್ಷರನ್ನು ನೇಮಕ ಮಾಡುತ್ತಾರೆ. ಮಂಡಳಿಯಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಇರಬಾರದು ಎಂದು ಕಾನೂನು ಇದ್ದರೇ, ಈ ಕುರಿತು ಹೋರಾಟ ಮಾಡಲಾಗುವುದು. ಜಿಂದಾಲ್ ಸಂಸ್ಥೆಯ ಭೂಮಿ ಮಾರಾಟ ಮಾಡುವ ಕುರಿತು ಉಪ ಸಮಿತಿ ರಚಿಸಲಾಗಿದೆ. ಅಲ್ಲದೇ, ಮಾರಾಟ ಮಾಡುವ ಕುರಿತು ಸ್ಪಷ್ಟತೆ ಇಲ್ಲ. ಸರಕಾರ ಮತ್ತು ಜಿಂದಾಲ್ ಸಂಸ್ಥೆ ಭೂಮಿ ಮಾರಾಟ ಕುರಿತು ಹೇಳಿಕೆ ನೀಡಿಲ್ಲ. ಹಾಗಾಗಿ ಈ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ. ಶಾಸಕ ಆನಂದ ಸಿಂಗ್‌ ಅವರ ಸ್ವಂತ ಅಭಿಪ್ರಾಯವಾಗಿದೆ. ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಸ್ವಾತಂತ್ರವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖಂಡ ಸಂದೀಪ ಸಿಂಗ್‌ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಗಿರೀಶ್‌ ಕಾರ್ನಾಡ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಕಮಲಾಪುರ ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರಿಗೆ ಗೌರವಿಸಲಾಯಿತು.

ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್‌ ಅಧ್ಯಕ್ಷರಾದ ಟಿ.ರಫೀಕ್‌, ಅಮಾಜಿ ಹೇಮಣ್ಣ, ಮುಖಂಡರಾದ ಎಚ್.ಎನ್‌.ಎಫ್.ಇಮಾಮ್‌ ನಿಯಾಜಿ, ಎಲ್.ಸಿದ್ದನಗೌಡ, ಅಯ್ನಾಳಿ ತಿಮ್ಮಪ್ಪ, ಗುಜ್ಜಲ ರಘು, ವೀರಸ್ವಾಮಿ, ಫ‌ಯಿಮ್‌ ಬಾಷಾ, ಡಿ.ವೆಂಕಟರಮಣ, ಉದ್ದಾನಪ್ಪ, ಕೆ.ಮುಕ್ತಿಯಾರ ಪಾಷಾ, ನಿಂಬಗಲ್ ರಾಮಕೃಷ್ಣ, ಎನ್‌.ವೆಂಕಟೇಶ, ವಿ.ಸೋಮಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next