Advertisement

ಕಮಲಾಪುರ ಕೆರೆ ನಿರ್ವಹಣೆ: ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ

02:53 PM Aug 14, 2019 | Naveen |

ಹೊಸಪೇಟೆ: ವಿಜಯನಗರ ಕಾಲದ ಐತಿಹಾಸಿಕ ಕಮಲಾಪುರ ಕೆರೆಗೆ ಅಧಿಕಾರಿಗಳ ನಿರ್ಲಕ್ಷ್ಯಧೋರಣೆ ಹೊಂದಿದ್ದಾರೆ ಎಂದು ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿ (ಡಬ್ಲ್ಯೂಎಚ್ಸಿ) ವಿಷಾದ ವ್ಯಕ್ತಪಡಿಸಿದೆ.

Advertisement

ಕಳೆದ 2017 ರಲ್ಲಿ ಕ್ರಾಕೋದಲ್ಲಿ ನಡೆದ 41ನೇ ಅಧಿವೇಶನದಲ್ಲಿ ಕಮಲಾಪುರ ಕೆರೆ ಕೆಳಭಾಗದ ರಸ್ತೆ ಅಗಲೀಕರಣ ಕುರಿತಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಾಣ ಪ್ರಾಧಿಕಾರದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಡಬ್ಲ್ಯೂಎಚ್ಸಿ ಸದಸ್ಯರು ವಿಷಾದಿಸಿ, ಈ ಎರಡೂ ಇಲಾಖೆಗಳಿಗೆ ಪತ್ರ ಬರೆದಿದೆ. ಆದರೆ ಇಲಾಖೆಗಳ ಉತ್ತರ ಈವರಗೆ ಸಮಿತಿ ಕೈ ಸೇರಿಲ್ಲ ಎಂದು ಸ್ಥಳೀಯ ಮುಖಂಡ ಶಿವಕುಮಾರ್‌ ಮಾಳಗಿ ದೂರಿದ್ದಾರೆ.

ದೀಪದ ಕೆಳಗೆ ಕತ್ತಲು ಎಂಬಂತೆ ಅನತಿ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಕಮಲಾಪುರ ಕೆರೆಗೆ ನೀರಿಲ್ಲದೇ ಬಣ ಗುಡುತ್ತಿದೆ. ಸುಮಾರು 450 ಎಕರೆ ವಿಸ್ತಾರದ ಐತಿಹಾಸಿಕ ಕಮಲಾಪುರ ಕೆರೆ ನೀರಿಲ್ಲದೇ ಸಂಪೂರ್ಣವಾಗಿ ಬರಿದಾಗಿ ಬಣಗುಡುತ್ತಿದೆ. ವಿಜಯನಗರ ಕಾಲದ ನೀರಾವರಿ ಯೋಜನೆಗಳಲ್ಲಿ ಕಮಲಾಪುರ ಕೆರೆ ರಾಜಧಾನಿಗೆ ಕುಡಿಯುವ ನೀರಿನ ಮೂಲ ಒದಗಿಸಿತ್ತು. ಸಮೀಪದ ಕಾರಿಗನೂರು ಹಿಂಭಾಗದ ಸಂಡೂರಿನ ಉತ್ತರ ಅರಣ್ಯ ವಲಯ ಹಾಗೂ ಬಿಳಿಕಲ್ಲು ಸಂರಕ್ಷಿತ ಅರಣ್ಯದ ಪಶ್ಚಿಮ ವಲಯದಲ್ಲಿ ಸುರಿದ ಮಳೆ ಹರಿದು ಕಮಲಾಪುರ ಕೆರೆ ಸೇರುತ್ತದೆ.

ಜಲಮೂಲ ನಾಶ: ಎನ್‌ಇಬಿ ಅರಣ್ಯ ಪ್ರದೇಶದಲ್ಲಿ ನಡೆದ ಗಣಿಗಾರಿಕೆಯಿಂದ ಬಿದ್ದಿರುವ ಬಾರಿ ಗಾತ್ರದ ಗುಂಡಿಗಳು ಕಮಲಾಪುರ ಕೆರೆಗೆ ಹರಿದು ಜಲಮೂಲವನ್ನು ತಡೆದು ನಿಲ್ಲಿಸಿವೆ. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ ನಿರ್ಮಾಣದ ಕಾಲದಲ್ಲಿಯೇ ಮೇಲ್ ಸೇತುವೆ ನಿರ್ಮಿಸಿ ಸೋಮಪ್ಪನ ಕೆರೆ ಮತ್ತು ಅಕ್ಕಮ್ಮನ ಕೆರೆಗಳು ತುಂಬಿದಾಗ ಹರಿಯುವ ಹೆಚ್ಚುವರಿ ನೀರು ಸರಾಗವಾಗಿ ಕಮಲಾಪುರ ಕೆರೆಗೆ ಹರಿದು ಬರುವ ವ್ಯವಸ್ಥೆ ಮಾಡಲಾಗಿತ್ತು.

ಬಿಳಿಕಲ್ಲು ಪಶ್ಚಿಮ ಅರಣ್ಯದಲ್ಲಿ ತಲೆ ಎತ್ತಿರುವ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಕೆರೆಗಳು, ಆರೇಂಜ್‌ ಕೌಂಟಿ ರೆಸಾರ್ಟ್‌ ತಡಗೋಡೆಯಿಂದ ಸೋಮಪ್ಪನ ಹಾಗೂ ಅಕ್ಕಮ್ಮನ ಕೆರೆಯ ನೀರು ಕಮಲಾಪುರ ಕೆರೆಗೆ ಹರಿಯುವುದು ಕಡಿಮೆಯಾಗಿ, ಜಲಮೂಲ ನಾಶವಾಗಿದೆ.

Advertisement

ಹಳ್ಳದ ದಾರಿ ಬಂದ್‌: ವಿಜಯನಗರದ ಕಾಲದಲ್ಲಿ ಅಂದಿನ ಬಸವ ಜಲಾಶಯದಿಂದ ಬಸವ ಕಾಲುವೆ ಮುಖಾಂತರ ಈ ಕೆರೆಗೆ ನೀರು ತುಂಬಿಸುವ ವ್ಯವಸ್ಥೆ ಇತ್ತು. ಆದರೆ, ತುಂಗಭದ್ರಾ ಜಲಾಶಯ ನಿರ್ಮಾಣದ ಬಳಿಕ ಬಲದಂಡೆ ಕೆಳ ಮಟ್ಟದ ಕಾಲುವೆಗೆ ಗಾಳೆಮ್ಮನ ಗುಡಿಯ ಹತ್ತಿರ ಒಂದು ತೂಬು ನಿರ್ಮಿಸಿ ಕೆರೆಗೆ ನೀರು ತುಂಬಿಸುವ ಸೌಲಭ್ಯ ಒದಗಿಸಲಾಗಿತ್ತು. ಆದರೆ, ಕೆರೆಯ ಹಿನ್ನಿರಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು, ಈ ತೂಬಿನಿಂದ ಕೆರೆಗೆ ನೀರು ಹರಿಯುವ ಹಳ್ಳದ ದಾರಿಯನ್ನು ಮುಚ್ಚಿ ಕೆಲ ಪ್ರಭಾವಿ ವ್ಯಕ್ತಿಗಳು ಕೃಷಿ ಮಾಡುತ್ತಿದ್ದಾರೆ. ತೂಬು ತೆರೆದರೇ ತಮ್ಮ ಬೆಳೆ ನಾಶವಾಗುವ ಕಾರಣಕ್ಕಾಗಿ ಈ ತೂಬು ತೆರೆಯದೇ ಕೆರೆಗೆ ನೀರು ತುಂಬಿಸದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next