ಹೊಸಪೇಟೆ: ಸಂಶೋಧನೆಯೇ ತಂತ್ರಜ್ಞಾನದ ಜೀವಾಳವಾಗಿದ್ದು, ಭಾರತ ತಾಂತ್ರಿಕ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಸಿಕಂದರಾಬಾದ್‌ನ ಕಾರ್ಪೋರೇಟ್ ಪ್ರೊಫೆಶನಲ್ ಅಕಾಡೆಮಿಯ ನಿರ್ದೇಶಕ ಡಾ| ವಿಜಯ ತರಾದ ಹೇಳಿದರು.
ನಗರದ ಪಿಡಿಐಟಿ ಕಾಲೇಜಿನ ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ದೇಶದ ಜಿಡಿಪಿಯ ಶೇಕಡಾ ಒಂದರಷ್ಟನ್ನು ಮಾತ್ರ ಸಂಶೋಧನಾ ಉದ್ದೇಶಗಳಿಗೆ ವಿನಿಯೋಗಿಸುತ್ತಿದೆ. ಇದನ್ನು ದುಪ್ಪಟ್ಟುಗೊಳಿಸಬೇಕಾದ ಅಗತ್ಯವಿದೆ. ಭಾರತದ ತಾಂತ್ರಿಕ ಶಿಕ್ಷಣ ವ್ಯವಸ್ಥೆ, ಸಂಶೋಧನಾ ಸಂಸ್ಕೃತಿಯನ್ನು ಗಂಭೀರವಾಗಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಕೋರಿಯಾ, ತೈವಾನ್, ಸಿಂಗಾಪುರ ಹಾಗೂ ಚೀನಾ ದೇಶಗಳು ಸಂಶೋಧನಾ ಕ್ಷೇತ್ರದಲ್ಲಿ ದಶಕದ ಹಿಂದೆ ಹೆಚ್ಚಿನ ಒತ್ತು ನೀಡಿದ ಪರಿಣಾಮವಾಗಿ ಜಾಗತೀಕವಾಗಿ ಔದ್ಯಮಿಕ ಉತ್ಪಾದನೆಯಲ್ಲಿ ಮಂಚೂಣಿಯಲ್ಲಿವೆ ಎಂದರು.
ಪುಣೆಯ ಕೇಂದ್ರೀಯ ಜಲಸಂಪನ್ಮೂಲ ಹಾಗೂ ವಿದ್ಯುತ್ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಎನ್. ವಿವೇಕಾನಂದನ್ ಮಾತನಾಡಿ, ಸರ್ಕಾರಗಳು ದೇಶದ ಆರ್ಥಿಕ ಹಾಗೂ ತಾಂತ್ರಿಕ ನೀತಿ ರೂಪಿಸುವಾಗ ಮಾನವನ ಮೂಲ ಅವಶ್ಯಕತೆಗಳಾದ ನೀರು, ವಿದ್ಯುತ್, ಪರಿಸರದ ಗುಣಮಟ್ಟಗಳಿಗೆ ಹೆಚ್ಚಿನ ಒತ್ತು ನೀಡುವ ಪರಿಪಾಠ ಇದೆ. ಈ ನೀತಿಗೆ ಅನುಗುಣವಾಗಿ ಸಂಶೋಧನೆ ತನ್ನ ದಿಕ್ಕನ್ನು ನಿರ್ಧರಿಸಬೇಕಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಎಸ್.ಎಂ. ಶಶಿಧರ ಮಾತನಾಡಿ, ಉಗಿಯಂತ್ರದಿಂದ ಆರಂಭವಾದ ಔದ್ಯಮಿಕ ಕ್ರಾಂತಿ, ವಿದ್ಯುತ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ನಂತರ ಈಗ ವಿಶ್ವವು ನಾಲ್ಕನೇಯ ಔದ್ಯಮಿಕ ಕ್ರಾಂತಿಯ ಹಂತದಲ್ಲಿದೆ ಎಂದರು.
ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಏಕಾಮರೇಶ ಮಾತನಾಡಿದರು. ಈ ಸಂದರ್ಭದಲ್ಲಿ ಸಂಶೋಧನಾ ಪ್ರಬಂಧಗಳ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಡಾ| ಯು.ಎಂ. ರೋಹಿತ್, ಅರಿಹಂತ ಚಜ್ಜರ್, ಡಾ| ಶಿವಕೇಶವ ಕುಮಾರ, ಪ್ರೊ| ಶಾಂತಕುಮಾರ್ ಇದ್ದರು. ವೀರಭದ್ರಪ್ಪ ಅಲ್ಗೂರ್ ಸ್ವಾಗತಿಸಿದರು. ಪ್ರೊ| ಪೂರ್ಣಿಮಾ ಕೆ. ಹಾಗೂ ಪ್ರೊ| ಫಿರ್ದೋಸ್ ಪರ್ವೀನ್ ನಿರೂಪಿಸಿದರು. ಪ್ರೊ| ಮಹೇಶ ಓಬಣ್ಣನವರ್ ವಂದಿಸಿದರು.