ಹೊಸಪೇಟೆ: ತಾಲೂಕಿನ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಸಾರ್ವಜನಿಕರಿಂದ ಡೊನೇಶನ್ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಹೆಚ್ಚು ಹಣ ನೀಡುವ ಮಕ್ಕಳಿಗೆ ಮಾತ್ರ ಶಾಲೆಯಲ್ಲಿ ದಾಖಲಾತಿ ಎಂಬ ‘ಅರಣ್ಯ ನೀತಿ’ ಜಾರಿಯಲ್ಲಿದೆ. ಡೊನೇಷನ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ “ಡೊನೇಷನ್ ವಿರೋಧಿ ಸಮಿತಿ”ಯನ್ನು ರಚಿಸಲಾಗಿತ್ತು. ಅದೇ ರೀತಿಯಾಗಿ 2008ರಿಂದ ಶಾಸಕರ ಅಧ್ಯಕ್ಷತೆಯಲ್ಲಿ ಡೊನೇಷನ್ ವಿರೋಧಿ ಸಮಿತಿ ರಚಿಸಿ ಅದರ ವರದಿಯನ್ನು ಶಿಕ್ಷಣ ಇಲಾಖೆ ಮತ್ತು ಶಾಸಕರಿಗೆ ನೀಡಲಾಗುತ್ತಿತ್ತು. ಇಲಾಖೆಯಿಂದಲು ಸಹ ಕೆಲವು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಸಮಿತಿ ಕೊಟ್ಟ ವರದಿಯ ಆಧಾರದ ಮೇಲೆ ಇಲಾಖೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.
ನಿಯಮಗಳನ್ನು ಮೀರಿ ಹಗಲು ದರೋಡೆಗೆ ಇಳಿದಿರುವ ಖಾಸಗಿ-ಅನುದಾನಿತ ಶಾಲೆಗಳನ್ನು ಇಲಾಖೆ ನಿಯಂತ್ರಿಸದೆ ಮೌನವಾಗಿರುವುದು. ಇದರಲ್ಲಿ ಶಿಕ್ಷಣ ಇಲಾಖೆ ಪಾಲು ಇರಬಹುದು ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ ಎಂದು ಆರೋಪಿಸಿದರು.
ಪ್ರತಿ ಶಾಲೆಗಳ ಮುಂದೆ ಬೋಧನಾ ಶುಲ್ಕ, ಅಭಿವೃದ್ಧಿ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕ ಮತ್ತು ಬಂಡವಾಳ ವೆಚ್ಚ ಸಂಗ್ರಹಿಸಲು ಸರ್ಕಾರ ಸೂಚಿಸಿರುವ ನಿಯಮದ ಪ್ರಕಾರ ತಮ್ಮ ಶಾಲೆಗಳಿಗೆ ಅನ್ವಯಿಸಿದ ಶುಲ್ಕಗಳನ್ನು ಸಂಗ್ರಹಿಸಲು ಇರುವ ವಿವರಗಳನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕು. ಡೊನೇಷನ್ ಹೆಸರಿನಲ್ಲಿ ವಿದ್ಯಾರ್ಥಿಗಳ ತಂದೆ-ತಾಯಿ-ಪೋಷಕರಿಂದ ಹಣವನ್ನು ವಸೂಲಿ ಮಾಡಿರುವ, ಮಾಡುತ್ತಿರುವ ಶಾಲೆಗಳ ಮೇಲೆ ಶಿಸ್ತು ಕ್ರಮವನ್ನು ಕೈಗೊಂಡು ಡೊನೇಷನ್ ಹಣವನ್ನು ಪೋಷಕರಿಗೆ ಮರುಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಬಿಸಾಟಿ ಮಹೇಶ್, ಕಲ್ಯಾಣಯ್ಯ, ಕಿನ್ನಾಳ್ ಹನುಮಂತ, ಇ.ಮಂಜುನಾಥ, ಬಂಡೆ ತಿರುಕಪ್ಪ, ಕೆ.ಎಂ.ಸತೋಷ್, ವಿಜಯಕುಮಾರ್, ಚಂದ್ರಶೇಖರ್ ಇನ್ನಿತರರಿದ್ದರು.