ಹರಪನಹಳ್ಳಿ: ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಶ್ರೀ ನಾರದಮುನಿ ರಥೋತ್ಸವ ಸಂದರ್ಭದಲ್ಲಿ ಜರುಗಿದೆ.
ಸುರೇಶ ಬಿ.(42) ಸಾವನ್ನಪ್ಪಿದ ಭಕ್ತ, ದಾವಣಗೆರೆಯ ಮಹೇಂದ್ರ ಶೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸುರೇಶ ಅವರು ಕುಟುಂಬ ಸಮೇತರಾಗಿ ನಾರದಮುನಿ ರಥೋತ್ಸವಕ್ಕೆ ತಾಲೂಕಿನ ಚಿಗಟೇರಿ ಗ್ರಾಮಕ್ಕೆ ಬೆಳಿಗ್ಗೆ 11 ಗಂಟೆಗೆ ಬಂದಿದ್ದರು.
ಗ್ರಾಮದ ಹೊಂಡದ ಬಳಿ ಪತ್ನಿಯನ್ನು ಬಿಟ್ಟು ತಂದೆ ಹಾಗೂ ಮಗ ರಥದ ಬಳಿ ಆಗಮಿಸಿದ್ದಾರೆ. ಸಂಜೆ 4.30ಕ್ಕೆ ರಥ ಎಳೆದಾಗ ಕೇವಲ 5-6 ಅಡಿ ರಥ ಚಲಿಸಿದಾಗ ಬಾಳೆ ಹಣ್ಣಿನ ಸಿಪ್ಪೆ ತುಳಿದು ಜಾರಿ ಬಿದ್ದ ಸುರೇಶ ರಥದ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ತಂದೆಯ ಜೊತೆ ಮಗನು ಸಹ ಕೆಳಕ್ಕೆ ಬಿದ್ದಾಗ ತಕ್ಷಣ ಪೋಲೀಸರು ಹಾಗೂ ಜನರು ಮಗನನ್ನು ಮೇಲಕ್ಕೆತ್ತಿದ್ದಾರೆ ಪರಿಣಾಮ ಮಗ ಪ್ರಾಣಪಾಯದಿಂದ ಪಾರಾಗಿದ್ದಾನೆ. ಮೃತ ಸುರೇಶನ ಶವವನ್ನು ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ, ಈ ಸಂಬಂಧ ಚಿಗಟೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕುಳಗೇರಿಯಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರ… ಜನಜೀವನ ತತ್ತರ