Advertisement

ಕಿರಾಣಿ ಅಂಗಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

03:32 PM Apr 27, 2020 | Naveen |

ಹೊಸಪೇಟೆ: ನಗರದ ಕಿರಾಣಿ ಅಂಗಡಿಗಳು ದಿನಸಿಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಿಪಿಐಎಂ ಕಾರ್ಯಕರ್ತರು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸೀಫ್‌ ಅವರನ್ನು ಆಗ್ರಹಿಸಿದ್ದಾರೆ.

Advertisement

ಕೋವಿಡ್  ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಾಗಿ, ಬಡವರು-ರೈತರು, ಕಾರ್ಮಿಕರು, ಕೆಲಸ-ಕಾರ್ಯವಿಲ್ಲದೇ ಒಂದೊತ್ತಿನ ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕಿರಾಣಿ ಅಂಗಡಿಯವರು, ದಿನಸಿಗಳನ್ನು ದುಪ್ಪಟ್ಟು ಬೆಲೆ ಮಾರಾಟ ಮಾಡುತ್ತಿರುವುದು, ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಬಡಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಲಾಕ್‌ಡೌನ್‌ ಜಾರಿಯಾದ ದಿನದಿಂದಲೂ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸದೇ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಪರಿತಪಿಸುತ್ತಿದ್ದಾರೆ.

144 ಕಲಂನ್ನು ಕರ್ಫ್ಯೂ ಮಾದರಿಯಲ್ಲಿ ಜಾರಿ ಮಾಡುತ್ತಿರುವುದು, ಪ್ರಜಾಸತ್ತಾತ್ಮಕ ಹರಣ ಹಾಗೂ ಸಂವಿಧಾನ ಉಲ್ಲಂಘನೆಯಾಗುತ್ತದೆ. ಸಾಮಾಜಿಕ ಅಂತರ ಅಸ್ತ್ರವನ್ನಾಗಿ ಬಳಿಸಲಾಗುತ್ತಿದೆ. ಕೋವಿಡ್‌ -19 ಜಾಗೃತಿಗಿಂತಲೂ ಜನರಿಗೆ ಭಯ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಕಿರಾಣಿ ಅಂಗಡಿಯಲ್ಲಿ ದರಪಟ್ಟಿ ಹಾಗೂ ದಾಸ್ತಾನು ಸಂಗ್ರಹ ಪ್ರಕಟಿಸಬೇಕು. ಕಾಳಸಂತೆಯನ್ನು ತಡೆಯಬೇಕು. ನಗರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆ ಕಡ್ಡಾಯವಾಗಿ ತೆರೆಯಲು ಕ್ರಮ ಕೈಗೊಳ್ಳಬೇಕು. 144 ಸೆಕ್ಷನ್‌ ಹಿಂಪಡೆದು, ಕೊವಿಡ್‌ -19 ಮಾರ್ಗಸೂಚನೆಗಳನ್ನು ಪಾಲಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆರ್‌. ಭಾಸ್ಕರ ರೆಡ್ಡಿ, ಎಂ. ಜಂಬಯ್ಯ ನಾಯಕ, ಎ. ಕರುಣಾನಿಧಿ , ಎಂ. ಗೋಪಾಲ ಹಾಗೂ ಯಲ್ಲಾಲಿಂಗ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next