ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರ ಗ್ರಾಮದ ಶ್ರೀ ಮುರುಗನ್ (ಸುಬ್ರಮಣ್ಯಸ್ವಾಮಿ)ದೇವಸ್ಥಾನದ ಆಡಿ ಕೃತ್ತಿಕೆಯ 46ನೇ ವಾರ್ಷಿಕೋತ್ಸವದ ಅಂಗವಾಗಿ ಭಕ್ತರು, ಬಾಯಿ, ಮೈ ಮತ್ತು ಬೆನ್ನಿಗೆ ತಂತಿ ಸರಳು ಚುಚ್ಚಿಸಿಕೊಂಡು ದೇವರಿಗೆ ಹರಕೆ ತೀರಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.
ಶ್ರೀ ವಿನಾಯಕ ಅಲಂಕಾರ ರಥೋಟ, ಸುಂದರ ಸೌಂದರ್ಯ ಪಳನಿ ಬೆಟ್ಟದ ಅಲಂಕಾರ ರಥೋಟ, 18 ಮೆಟ್ಟಿಲು ಮೇಲೆ ಕುಳಿತ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ಅಲಂಕಾರ ರಥೋಟ, ಹೂವಿನ ಕಾವಡಿ, ಹಾಲಿನ ಕಾವಡಿ, ಗುಂಡು ಅಲಗು, ಕಾರು ಅಲಗು, ರಾಕೇಟ್ ಅಲಗು ಹಾಗೂ ಶ್ರೀ ಸುಬ್ರಮಣ್ಯಸ್ವಾಮಿ ಶೂಲಾಯುಧವನ್ನು ದೇಹಕ್ಕೆ ಸಿಕ್ಕಿಸಿಕೊಂಡ ಭಕ್ತರು, ಮುರುಗನ್ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಭಕ್ತಿ ಸಮರ್ಪಣೆ ಮಾಡಿದರು.
ಬೆನ್ನಿಗೆ ತಂತಿಯನ್ನು ಸಿಕ್ಕಿಸಿಕೊಂಡ ಭಕ್ತರೊಬ್ಬರು ಆಟೋ ಎಳೆದರೆ, ಮೊತ್ತೂಬ್ಬರು ಬೃಹತ್ ಗುಂಡನ್ನು ಎಳೆದರು. ಬಾಲಕನೊಬ್ಬ ಮೈತುಂಬ ಸಿಕ್ಕಿಸಿಕೊಂಡ ತಂತಿಯಲ್ಲಿ ನಿಂಬೆಹಣ್ಣು ಧರಿಸಿ ಭಕ್ತಿ ಪ್ರದರ್ಶನ ಮಾಡಿದ ದೃಶ್ಯ ಮೈನವಿರೇಳುವಂತೆ ಮಾಡಿತ್ತು.
ಬೆಳಗ್ಗೆ 10-30ಕ್ಕೆ ಆರಂಭವಾದ ಭಕ್ತರ ಮೆರವಣಿಗೆ ಮಧ್ಯಾನ್ಹದವರೆ ಗ್ರಾಮದ ಮುಖ್ಯ ಬೀದಿ ಮೂಲಕ ಶ್ರೀ ಮುರುಗನ್ ದೇವಾಲಯದಲ್ಲಿ ಕಾವಡಿ ಅಲಗು ಪ್ರತಿಷ್ಠಾಪಿಸುವ ಮೂಲಕ ಸಂಪನ್ನಗೊಂಡಿತು. ಸಂಜೆ ಶ್ರೀ ವಳ್ಳಿ ದೈವಯಾನೆಯರೊಂದಿಗೆ ಶ್ರೀ ಸುಬ್ರಮಣ್ಯ ಸ್ವಾಮಿ ಕಲ್ಯಾಣೋತ್ಸವ ನಡೆಯಿತು.
ಆಡಿ ಕೃತ್ತಿಕೆಯ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರತಿಮೆಗೆ ಅಭಿಷೇಕ, ಅಲಂಕಾರ ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮದ ಮುಖಂಡರಾದ ಇ. ಶಂಕರ್‌ವೇಲು, ಇ. ಸೆಲ್ವರಾಜ್, ಗೋವಿಂದ ರಾಜ್, ಶಿಲ್ಪಿರಾಜ್,ಅಯ್ಯಪ್ಪ, ಮುರಗನ್, ಚಂದ್ರ, ವೆಂಕಟೇಶ್, ಗಣೇಶ್, ಹುಲಗಪ್ಪ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.