ಬಳ್ಳಾರಿ: ವಿಜಯನಗರ ಶಾಸಕ ಆನಂದ್‌ಸಿಂಗ್ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಡೆಸಿರುವ ಹಲ್ಲೆ ಪ್ರಕರಣ ರಾಜಕೀಯ ತಿರುವು ಪಡೆದು ಕೊಳ್ಳುತ್ತಿದೆ. ಹಲ್ಲೆ ಖಂಡಿಸಿ ಆನಂದ್‌ಸಿಂಗ್ ಅಭಿಮಾನಿಗಳು ಜ.24ರಂದು ಕರೆ ನೀಡಿದ್ದ ಹೊಸಪೇಟೆ ಬಂದ್‌ಗೆ ಸ್ವಂತ ಕ್ಷೇತ್ರದಲ್ಲೇ ಪರ- ವಿರೋಧ ಚರ್ಚೆ ನಡೆಯುತ್ತಿದ್ದು, ಇದರಿಂದ ಖುದ್ದು ಶಾಸಕ ಆನಂದ್‌ಸಿಂಗ್ ಅವರೇ ಬಂದ್ ನಡೆಸದಂತೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಂದ್ ರದ್ದು ಗೊಳಿಸಲಾಗಿದೆ. ಜತೆಗೆ, ಘಟನೆಯಿಂದಾಗಿ ‘ಆಪರೇಷನ್ ಕಮಲ’ಕ್ಕೂ ಸದ್ಯದ ಮಟ್ಟಿಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.
ಜ.20ರಂದು ಈಗಲ್ಟನ್ ರೆಸಾರ್ಟ್‌ನಲ್ಲಿ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಅಂದು ಸಂಜೆಯೇ ಜಿಲ್ಲೆಯ ಹೊಸಪೇಟೆ ಮತ್ತು ಕಮ ಲಾಪುರದಲ್ಲಿ ಆನಂದ್ ಸಿಂಗ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಗಿತ್ತು. ಜೊತೆಗೆ, ಆನಂದ್‌ಸಿಂಗ್ ಅಭಿಮಾನಿಗಳು ಪ್ರಚೋದನಕಾರಿ ಮಾತು ಗಳನ್ನಾಡಿರುವ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಜ.24 ರಂದು ಹೊಸಪೇಟೆ ಬಂದ್‌ಗೆ ಕರೆ ನೀಡಿದ್ದರು.
ಇದೇ ವೇಳೆ, ಮತ್ತೂಂದು ವರ್ಗ ‘ಹೊಸಪೇಟೆ ಬಂದ್‌ಗೆ ನನ್ನ ವಿರೋಧವಿಲ್ಲ’ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ‘ಯಾವ ಪುರುಷಾರ್ಥಕ್ಕಾಗಿ ಬಂದ್, ನಾವೇನು ರೆಸಾರ್ಟ್‌ಗೆ ಹೋಗಿ ಜಗಳ ಮಾಡಿಕೊಂಡು ಬನ್ನಿ ಎಂದಿದ್ದೀವಾ? ಬಂದ್ ಮಾಡಿದರೆ ಕಾರ್ಮಿಕರ ಪರಿಸ್ಥಿತಿ ಏನು?, ಬೇಕಾದರೆ ಕಂಪ್ಲಿಗೆ ಹೋಗಿ ಪ್ರತಿಭಟನೆ ಮಾಡಿಕೊಳ್ಳಲಿ’ ಎನ್ನುವ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಂದ್‌ಗೆ ವಿರೋಧ ವ್ಯಕ್ತಪಡಿಸಿತ್ತು. ಆಸ್ಪತ್ರೆಯಲ್ಲಿದ್ದುಕೊಂಡೇ ಈ ಬೆಳವಣಿಗೆಗಳನ್ನು ಗಮನಿಸಿರುವ ಶಾಸಕ ಆನಂದ್‌ಸಿಂಗ್, ಬಂದ್ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿ, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಆಪರೇಷನ್ ಕಮಲಕ್ಕೆ ಬ್ರೇಕ್: ಇದೇ ವೇಳೆ, ಶಾಸಕ ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಸದ್ಯ ಜಿಲ್ಲೆಯ ಮಟ್ಟಿಗೆ ಆಪರೇಷನ್ ಕಮಲಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ಆಪರೇಷನ್ ಕಮಲದಲ್ಲಿ ಹೆಸರು ಕೇಳಿ ಬರುತ್ತಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ, ಕಂಪ್ಲಿ ಕ್ಷೇತ್ರದಲ್ಲೂ ಗಣೇಶ್ ಅಭಿಮಾನಿಗಳು ಗಣೇಶ್ ಅವರನ್ನು ಅಮಾನತು ಮಾಡಬಾರದು ಎಂದು ಪ್ರತಿಭಟನೆ ನಡೆಸಿದ್ದು, ಕೂಡಲೇ ಅಮಾನತು ಹಿಂಪಡೆಯ ಬೇಕು ಎಂದು ಒತ್ತಾಯಿಸಿದ್ದಾರೆ.
ಬಂಧನಕ್ಕೆ ಹೆದರಿ ಪರಾರಿ!
ಘಟನೆ ಹಿನ್ನೆಲೆಯಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಬಂಧನದ ಭೀತಿ ಎದುರಿಸುತ್ತಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಾಪತ್ತೆಯಾಗಿದ್ದಾರೆ. ಮಂಗಳವಾರ ಬಳ್ಳಾರಿಗೆ ಆಗಮಿಸಿ ಪಕ್ಷದ ಪ್ರಭಾವಿ ಮುಖಂಡರೊಬ್ಬರ ಕಚೇರಿಯಲ್ಲಿ ಎರಡು ಗಂಟೆಗೂ ಹೆಚ್ಚು ಹೊತ್ತು ಇದ್ದರು. ಘಟನೆಗೆ ಸಂಬಂಧಿಸಿದಂತೆ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಬಳ್ಳಾರಿಯಿಂದ ಪುನ: ವಾಪಸ್ ತೆರಳಿದ್ದಾರೆ ಎಂದು ತಿಳಿದು ಬಂದಿದೆ.