Advertisement

ಕುಲುಮೆ ಕೆಲಸಕ್ಕೆ ಲಾಕ್‌ಡೌನ್‌ ತಣ್ಣೀರು!

03:30 PM Apr 27, 2020 | Naveen |

ಹೊಸನಗರ: ರೈತ ಮತ್ತು ಅವರ ಕೃಷಿ ಕಾರ್ಯವನ್ನೇ ನಂಬಿಕೊಂಡ ಕುಲುಮೆಯ ಬೆಂಕಿ ಆರುತ್ತಿದೆ. ಮುಂಗಾರು ಸಮೀಪಿಸುತ್ತಿದ್ದರೂ ಕೃಷಿ ಸಲಕರಣೆಯನ್ನು ಸಜ್ಜುಗೊಳಿಸಲು ರೈತರು ಬಾರದೆ ಕುಲುಮೆ ಕಾರ್ಮಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಮಾತ್ರ ಲಾಕ್‌ಡೌನ್‌ ಎಫೆಕ್ಟ್.

Advertisement

ಹೌದು, ಮಳೆಗಾಲ ಆರಂಭಗೊಳ್ಳುವ ಮುನ್ನ ಕುಲುಮೆಯತ್ತ ರೈತರ ಸಂದಣಿ ಸಹಜವಾಗಿ ಕಂಡುಬರುತ್ತದೆ. ಕೃಷಿಗೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡು ಹೊಲಕ್ಕೆ ಇಳಿಯುವುದು ವರ್ಷಂಪ್ರತಿ ಕಂಡುಬರುತ್ತದೆ. ಅದರಲ್ಲೂ ಮಾರ್ಚ್‌, ಏಪ್ರಿಲ್‌, ಮೇ ಮೂರು ತಿಂಗಳು ಕುಲುಮೆಗಾರರಿಗೆ ಒಂದು ಕ್ಷಣ ಬಿಡುವು ಕೂಡ ಕಷ್ಟ. ಆದರೆ ಈ ಬಾರಿ ಹಾಗಿಲ್ಲ. ರೈತರ ಸುಳಿವೇ ಇಲ್ಲದೇ.. ಕುಲುಮೆ ಖಾಲಿ.. ಖಾಲಿ.. ಎಂಬಂತಾಗಿದೆ.

ರೈತರು ಬರುತ್ತಿಲ್ಲ: ಮಾರ್ಚ್‌ ತಿಂಗಳು ಬಂತೆಂದರೆ ರೈತರು ತಮ್ಮ ಹತಾರಗಳನ್ನು ಸಿದ್ಧಪಡಿಸಿಕೊಳ್ಳಲು ಕುಲುಮೆಯತ್ತ ಧಾವಿಸುತ್ತಾರೆ. ನೇಗಿಲು, ಕತ್ತಿ,ಕೊಡಲಿ, ಹೀಗೆ ಕೃಷಿಗೆ ಬೇಕಾದ ಎಲ್ಲಾ ಪರಿಕರಗಳ ದುರಸ್ಥಿ ಮಾಡಿಸಿಕೊಂಡೂ ಇಲ್ಲ.. ಮಾಡಿಟ್ಟ ಹತಾರವನ್ನು ಖರೀ ಸಿಕೊಂಡು ಹೊಲದತ್ತ ತೆರಳುತ್ತಾರೆ. ಆದರೆ ಈ ಬಾರಿಯ ಕೊರೊನಾ ಲಾಕ್‌ಡೌನ್‌ನಿಂದ ರೈತರು ಕೂಡ ಮನೆಯಿಂದ ಹೊರಬರುತ್ತಿಲ್ಲ.. ಇದರಿಂದ ಕುಲುಮೆ ಬದುಕನ್ನೇ ನಂಬಿಕೊಂಡಿರುವ ಕೃಷಿಕ ಕಾರ್ಮಿಕರ ಪಾಡು ಹೇಳತೀರದಾಗಿದೆ.

ವರ್ಷದ ಬದುಕಿಗೆ ಈ ಮೂರು ತಿಂಗಳೇ ಆಧಾರ: ಕುಲುಮೆ ಕೆಲಸ ವರ್ಷಪೂರ್ತಿ ಇರುವುದಿಲ್ಲ. ಮಳೆಗಾಲದ ಮುಂಚಿನ ಮೂರು ತಿಂಗಳು ಬಿಡುವಿಲ್ಲದ ಕೆಲಸವಿರುತ್ತದೆ. ಆ ದುಡಿಮೇ ಕುಲುಮೆಗಾರ ಕುಟುಂಬದ ವರ್ಷದ ಬದುಕಿನ ಆಧಾರ. ಇಂತಹ ಸಮಯದಲ್ಲೇ ಕೊರೊನಾ ವಕ್ಕರಿಸಿದ ಕಾರಣ ಕುಲುಮೆಗಾರ ಗರಬಡಿದು ಕೂರುವಂತಾಗಿದೆ.

ಕ್ಷೀಣಿಸುತ್ತಿದೆ ಕುಲುಮೆ ಸಂಖ್ಯೆ: ಕೃಷಿ ಪರಿಕರಗಳಿಗಾಗಿ ಹೊಸಹೊಸ ತಂತ್ರಜ್ಞಾನ ಆವಿಷ್ಕಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಲುಮೆಗಳು ಕಡಿಮೆಯಾಗುತ್ತಿವೆ.
ಹೊಸನಗರ ತಾಲೂಕೊಂದರಲ್ಲೇ ಸುಮಾರು 200ಕ್ಕು ಹೆಚ್ಚು ಕುಲುಮೆಗಳು ಸಕ್ರಿಯವಾಗಿದ್ದ ದಿನಗಳಿದ್ದವು. ಈಗ ಆ ಸಂಖ್ಯೆ 15 ರಿಂದ 20ಕ್ಕೆ ಇಳಿದಿದೆ. ಆ ನಡುವೆ ಕೊರೊನಾ ಕುಲುಮೆಯನ್ನು ಬುಡಸಮೇತ ಕಿತ್ತುಹಾಕುವ ಅಪಾಯ ತಂದೊಡ್ಡಿದೆ ಎಂಬ ಅಭಿಪ್ರಾಯ ಕೃಷಿ ಕಾರ್ಮಿಕರದ್ದು.

Advertisement

ಮಾರಾಟವೂ ಇಲ್ಲ: ರೈತರ ಪರಿಕರಗಳ ಕೆಲಸ ಕಾರ್ಯದ ಜೊತೆ, ಮನೆಗಳಲ್ಲಿ ಅಗತ್ಯವಾಗಿ ಬೇಕಾದ ಕತ್ತಿ, ಕೊಡಲಿ, ಹೆರೆಮಣೆ, ಹೀಗೆ ಹತ್ತು ಹಲವು ದಿನೋಪಯೋಗಿ ವಸ್ತುಗಳನ್ನು ತಯಾರಿಸಿ ಹಾರ್ಡ್‌ವೇರ್‌ ಇನ್ನಿತರ ಕೃಷಿ ಪರಿಕರ ಮಾರಾಟ ಅಂಗಡಿಗಳಿಗೆ ಮಾರಾಟಕ್ಕೆ ನೀಡುತ್ತಿದ್ದರು. ಆದರೆ ಯಾವುದೇ ವಾಹನ ಸಂಚಾರ ಇರದ ಕಾರಣ ಅವುಗಳ ತಯಾರಿಕೆಗೂ ಬ್ರೇಕ್‌ ಬಿದ್ದಿದೆ. ಒಟ್ಟಾರೆ ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಹರಡಿದರಬಹುದು. ಆದರೆ ಆ ಸೋಂಕು ರೈತರ ಒಡನಾಡಿ ಕುಲುಮೆಗಾರ ದುಡಿಮೆಯ ಬದುಕಿನ ಮೇಲೆ ವಕ್ರದೃಷ್ಟಿ ಬೀರಿರುವುದು ಮಾತ್ರ ಸುಳ್ಳಲ್ಲ

ಸರ್ಕಾರ ರೈತರ ಸಾಲ ಮನ್ನಾ. ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ರೈತರ ಬೆನ್ನೆಲುಬು ಆದ ನಮ್ಮಂತ ಕುಲುಮೆಗಾರರ ಬದುಕಿಗೆ ಆಸರೆಯಾಗಿ ಯಾವುದೇ ಯೋಜನೆ ತಂದಿಲ್ಲ. ಅದರಲ್ಲೂ ಕೊರೊನಾ ಮಹಾಮರಿ ವರ್ಷದ ದುಡಿಮೆಯನ್ನೇ ಹೊಸಕಿ ಹಾಕಿದೆ. ಹೀಗಾದರೆ ಬದುಕು ಕಷ್ಟ. ಸರ್ಕಾರ ಎಚ್ಚೆತ್ತು ಕ್ಷೀಣಿಸುತ್ತಿರುವ ಕುಲುಮೆ ಬದುಕಿಗೆ ಆಧಾರವಾಗಬೇಕಿದೆ.
ಸೀತಾರಾಮ ಆಚಾರ್‌, ಚಿಕ್ಕಪೇಟೆ
ಕುಲುಮೆ ಕೆಲಸಗಾರ

ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next