ಹೊಸನಗರ: ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡು ಸುಮಾರು 8 ಗ್ರಾಂ ತೂಕದ 3 ಚಿನ್ನದ ಉಂಗುರ ಸಹಿತ 20 ಸಾವಿರ ರೂ. ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾ.ಪಂ. ವ್ಯಾಪ್ತಿಯ ವರಕೋಡು ಗ್ರಾಮದಲ್ಲಿ ಅ.8ರ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಂಗಳವಾರ (ಅ.8ರ) ಮನೆಯ ಮಾಲೀಕ ಹನುಮಂತ ಕಾಮತ್ ವ್ಯಾಪಾರಕ್ಕೆಂದು ಕೋಡೂರು ಸಮೀಪದ ಅಮ್ಮನ ಘಟ್ಟದ ಶ್ರೀ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದರು.
ಹನುಮಂತ ಕಾಮತ್ ಅವರ ಪತ್ನಿ ಬಿದನೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದನ್ನೇ ಹೊಂಚುಹಾಕಿ ಕಾದಿದ್ದ ಕಳ್ಳರು ಮಧ್ಯಾಹ್ನ 2-4 ಗಂಟೆಯೊಳಗೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶಿಸಿ, ರೂಮಿನ ಕಬ್ಬಿಣದ ಬೀರುವಿನಲ್ಲಿದ್ದ 56 ಸಾವಿರ ರೂ. ಮೌಲ್ಯದ ನಗ ನಾಣ್ಯ ಕದ್ದು ಪರಾರಿಯಾಗಿದ್ದಾರೆ.
ಸಂಜೆ ವೇಳೆಗೆ ಮನೆಗೆ ಮರಳಿದ ಕುಟುಂಬ ವರ್ಗ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ಕಂಡು, ಮಾಲೀಕ ಹನುಮಂತ ಕಾಮತ್ ಕಳ್ಳತನ ಆಗಿರುವುದಾಗಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಹೊಸನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡದೊಂದಿಗೆ ಆಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೊಸನಗರ ಪೊಲೀಸ್ ಠಾಣೆ ಪಿಎಸ್ಐ ಶಂಕರ ಗೌಡ ಪಾಟೀಲ್ ನೇತೃತ್ವದ ತನಿಖೆ ಮುಂದುವರೆದಿದೆ.