ಹೊಸನಗರ: ಈ ನೆಲೆದ ಮೂಲ ಸಂಸ್ಕೃತಿ, ಅರಣ್ಯದ ಉಳಿವಿಗೆ ಆದಿವಾಸಿಗಳು ಮಾತ್ರ ಕಾರಣ ಎಂದು ಸಂಶೋಧಕ ಪ್ರೊ| ನಾಗ ಎಚ್. ಹುಬ್ಳಿ ಅಭಿಪ್ರಾಯಪಟ್ಟರು. ಇಲ್ಲಿನ ವಿದ್ಯಾಸಂಘದ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ಆದಿವಾಸಿಗಳ 3ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಆದಿವಾಸಿ, ಬುಡಕಟ್ಟು ಜನಾಂಗದ ಸಮುದಾಯವನ್ನು ಕಷ್ಟದ ದಳ್ಳುರಿಗೆ ಸರ್ಕಾರಗಳು ದೂಡಿವೆ ಎಂದು ದೂರಿದರು. ಆದಿವಾಸಿಗಳ ಹೆಬ್ಬೆಟ್ಟು ಮಾತ್ರ ಸರ್ಕಾರಕ್ಕೆ ತಲುಪುತ್ತಿದೆ. ಅವರಿಗೆ ಯಾವುದೇ ಅನುದಾನ, ಭೂಮಿ, ನೀರು, ಮೂಲ ಸೌಕರ್ಯ ತಲುಪುತ್ತಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಜನಾಂಗ ಇದೆ ಎಂದು ಸರ್ಕಾರ ಗುರುತಿಸಿದೆ. ಇವರಲ್ಲಿ 75ಕ್ಕೂ ಹೆಚ್ಚು ಜನಾಂಗ ಇನ್ನೂ ಕಾಡಿನಲ್ಲಿ ಇದ್ದು ಕಾಡು ಪಾಲಾಗಿದ್ದಾರೆ ಎಂದರು. ಜಾರ್ಖಂಡ್ ರಾಜ್ಯದಲ್ಲಿ ಕಳೆದ 17 ವರ್ಷಗಳಿಂದ ಆದಿವಾಸಿಗಳ ಕುರಿತಂತೆ ಸಂಶೋಧನೆ ನಡೆಸುತ್ತಿದ್ದೇನೆ ಎಂದು ನುಡಿದ ನಾಗ ಎಚ್. ಹುಬ್ಬಳ್ಳಿ ಆದಿವಾಸಿ ಮುಖ್ಯಮಂತ್ರಿ ಆಡಳಿತ ನಡೆಸಿದರೂ ಸಹ ಅವರ ಜೀವನ ಮಟ್ಟ ಸುಧಾರಿಸಿಲ್ಲ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಆದಿವಾಸಿ, ಬುಡಕಟ್ಟು ಜನಾಂಗದ ಅರಣ್ಯ ಹಕ್ಕು ಕಾಯ್ದೆಯನ್ನು ತಮ್ಮ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕವಾಗಿ ಜಾರಿಗೊಳಿಸಲಾಗಿದೆ. ಆದಿವಾಸಿಗಳಿಗೆ ಮನೆ, ಜಮೀನು ಸೇರಿದಂತೆ ಮೂಲ ಸೌಕರ್ಯದ ಹೋರಾಟಕ್ಕೆ ಈಗಲೂ ತಾವು ಬದ್ದ. ಈ ಕುರಿತಂತೆ ಸರ್ಕಾರದ ಗಮನ ಸೆಳೆಯೋಣ ಎಂದು ಭರವಸೆ ನೀಡಿದರು.
ಕರ್ನಾಟಕ ಪ್ರಾಂತ್ಯ ರೈತಸಂಘದ ಅಧ್ಯಕ್ಷ ಜಿ.ಸಿ. ಭೈರಾ ರೆಡ್ಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಜನರ ಬದುಕಿನ ಗಂಭೀರ ಬಿಕ್ಕಟ್ಟು ಬಗೆ ಹರಿಸುವಲ್ಲಿ ಇಲ್ಲಿಯ ತನಕ ಬಂದ ಎಲ್ಲಾ ಸರ್ಕಾರಗಳು ವಿಫಲವಾಗಿವೆ.
ಈ ಕುರಿತಂತೆ ಜ. 8ರಂದು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಜಿಪಂ ಸದಸ್ಯ ಕಲಗೋಡು ರತ್ನಾಕರ, ತಾಪಂ ಸದಸ್ಯ ಚಂದ್ರಮೌಳಿ, ಬಿಜೆಪಿ ಪ್ರಮುಖ ಎನ್. ಆರ್. ದೇವಾನಂದ್, ತ್ರಿಪುರಾ ರಾಜ್ಯದ ಮಾಜಿ ಸಚಿವ, ಆದಿವಾಸಿ ಅಕಾರ್ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ಸಂಚಾಲಕ ಜಿತೇಂದ್ರ ಚೌಧರಿ, ಆದಿವಾಸಿ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ವೈ.ಕೆ.ಗಣೇಶ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಡ, ಜಿ.ಆರ್.ಪ್ರೇಮ ಮತ್ತಿತರರು ಇದ್ದರು. ರಾಜ್ಯ ಸಂಚಾಲಕ ಎಸ್.ವೈ. ಗುರುಶಾಂತ್ ಸ್ವಾಗತಿಸಿದರು. ಎಸ್.ಬಿ. ಮಂಜಪ್ಪ ವಂದಿಸಿದರು.