ಹೊಸನಗರ: ಹಿಂದೂ ಧರ್ಮದ ಉನ್ನತಿಗೆ ಸಮಾಜದ ಸರ್ವರ ಪ್ರಯತ್ನವೂ ಅತ್ಯಂತ ಅಗತ್ಯ. ಅಲ್ಲದೆ ಧರ್ಮದ ಒಳಗಿನ ಶುದ್ಧಿಯೂ ಕೂಡ ಆಗಬೇಕಿದೆ ಎಂದು ಗರ್ತಿಕೆರೆ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕರಿಮನೆ (ನಿಲ್ಸಕಲ್) ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿಯ ಅಷ್ಟಬಂಧ ಪ್ರತಿಷ್ಠಾಪನಾ ಮಹೋತ್ಸವ ಮತ್ತು
ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ರಾಮನ ಭಂಟ ಹನುಮಂತನಾಗಿದ್ದು, ಆತನದ್ದು ಅತ್ಯಂತ ನಿಷ್ಕಲ್ಮಶ ಮನಸ್ಸಿನ ಸೇವೆ. ಸಾಧಿಸುವ ಮನಸ್ಸಿದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟವನು. ಶ್ರೀರಾಮ ಮತ್ತು ಹನುಮಂತನ ಬಾಂಧವ್ಯ ಮಾದರಿಯಾಗಿದ್ದು ಬದುಕಿನಲ್ಲಿ ಅಂತಹ ಪಾವನವಾದ ಸಾಮರಸ್ಯ, ನಂಬಿಕೆ, ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಧರ್ಮಸಭೆ ಉದ್ಘಾಟಿಸಿದ ಮಾಜಿ ಸಚಿವ ಕಿಮ್ಮನೆ: ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಧರ್ಮ ಎಂದು ಬದುಕಿನ ರೀತಿ ನೀತಿ, ದಾರಿಯನ್ನು ತೋರುವ ದೀಪ. ಎಲ್ಲ ಧರ್ಮದ ಸಾರವೂ ಒಂದೇ. ಬದುಕಿನಲ್ಲಿ ಎಲ್ಲಾ ಕೆಟ್ಟ ಗುಣಗಳನ್ನು ಹೊಂದಿ ದೇವರನ್ನು ಪ್ರಾರ್ಥಿಸಿದರೆ ಯಾವುದೇ ಫಲ ಸಿಗದು. ಬದುಕಿನಲ್ಲಿ ಒಳ್ಳೆಯತನವನ್ನು ರೂಢಿಸಿಕೊಂಡರೆ ದೇವರು ತಾನಾಗಿಯೇ ಹೃದಯದಲ್ಲಿ ನೆಲೆಸುತ್ತಾನೆ ಎಂದರು.
ಧಾರ್ಮಿಕ ಕಾರ್ಯಕ್ರಮ: ಬೆಳಗ್ಗೆಯಿಂದಲೇ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲೋಶತ್ಸವ ಅಂಗವಾಗಿ ವೇ|ಮೂ| ಸೂರ್ಯನಾರಾಯಣ ಭಟ್ ಮತ್ತು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಕಲ್ಕೂರು ನೇತೃತ್ವದಲ್ಲಿ ಪೂಜಾ ವಿಧಿಗಳು ಸಂಪನ್ನಗೊಂಡವು.
ಸನ್ನಿದಿಗೆ ಆಗಮಿಸಿದ ಶ್ರೀ ರೇಣುಕಾನಂದ ಶ್ರೀಗಳಿಗೆ ಭಕ್ತರು ಪಾದಪೂಜೆ ಮಾಡಿ ಬರಮಾಡಿಕೊಂಡರು. ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಸುರೇಶ ಸ್ವಾಮೀರಾವ್, ಗ್ರಾಪಂ ಅಧ್ಯಕ್ಷ ರಮೇಶ ಹಲಸಿನಹಳ್ಳಿ, ಸದಸ್ಯರಾದ ಎನ್. ವೈ. ಸುರೇಶ್, ಸತೀಶ ಪಟೇಲ್, ಈರಮ್ಮ ಬೋವಿ, ಗೌರವಾಧ್ಯಕ್ಷ ರಮೇಶ ಉಡುಪ, ಧರ್ಮಸ್ಥಳ ಒಕ್ಕೂಟದ ಬಾವಿಕಟ್ಟೆ ಸತೀಶ್ ಇದ್ದರು. ನಿಟ್ಟೂರು ಕಾಲೇಜು ಪ್ರಾಂಶುಪಾಲ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ ಸ್ವಾಗತಿಸಿದರು. ಗೋಪಾಲ್ ವಂದಿಸಿದರು. ಹರೀಶ್, ಶೇಷಾದ್ರಿ ಕಾರ್ಯಕ್ರಮ ನಿರೂಪಿಸಿದರು.