Advertisement

ಜಡಿ ಮಳೆಯಲ್ಲೂ ಮಾರ್ದನಿಸಿದ ಶರಾವತಿ ಕೂಗು

11:11 AM Jul 07, 2019 | Team Udayavani |

ಹೊಸನಗರ: ಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸುವ ಸಂಬಂಧ ವಿರೋಧ ಹೆಚ್ಚಾಗುತ್ತಿರುವ ಮಧ್ಯದಲ್ಲಿ ಮುಳುಗಡೆ ತವರು ನಗರ ಹೋಬಳಿಯಲ್ಲಿ ವಿನೂತನ ಹೋರಾಟವೊಂದು ದಾಖಲಾಗಿ ಗಮನ ಸೆಳೆದಿದೆ.

Advertisement

ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ನಗರ ಹೋಬಳಿಯಲ್ಲಿ ಕಳೆದೆರಡು ದಿನದಿಂದ ಭಾರೀ ಮಳೆ ಸುರಿಯುತ್ತಿದ್ದರೂ ಕೂಡ ಹೋಬಳಿಯ ಜನರು ಸ್ವಯಂಪ್ರೇರಿತಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸಿ ‘ಶರಾವತಿ ನಮ್ಮದು’.. ‘ಪ್ರಾಣ ಕೊಟ್ಟೇವು ಆದರೆ ನೀರು ಕೊಡೆವು’ ಎಂಬ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿ ಕೇಂದ್ರ ನಗರದ ನೂಲಿಗ್ಗೇರಿಯಿಂದ ಸುಮಾರು 3 ಕಿಮೀ ದೂರ ಪಾದಯಾತ್ರೆ ಮೆರವಣಿಗೆ ನಡೆಸಿದ ಜನರು ನಗರ ಗ್ರಾಪಂ ಕಚೇರಿಗೆ ಆಗಮಿಸಿ ಲಿಂಗನಮಕ್ಕಿ ನೀರು ಬೆಂಗಳೂರಿಗೆ ಹರಿಸದಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ಗಮನ ಸೆಳೆದಿದ್ದು: ಮೆರವಣಿಗೆಯಲ್ಲಿ ಪ್ರತಿಮನೆ ಮನೆಯಿಂದ ಗೃಹಿಣಿಯರು ಹೆಚ್ಚಾಗಿ ಹರಿದು ಬಂದಿದ್ದು ಒಂದೆಡೆಯಾದರೆ ಬಿರುಸಿನ ಗಾಳಿ ಮಳೆಯನ್ನು ಲೆಕ್ಕಿಸಿದೆ ಕೊಡೆ ಹಿಡಿದು ಸಾಗಿದ್ದು ಗಮನ ಸೆಳೆಯಿತು.

ಇನ್ನು ಪ್ರತಿಭಟನೆಯಲ್ಲಿ ಹಲವರು ಮಂಡಾಳೆ ಮತ್ತು ಕಂಬಳಿಕೊಪ್ಪೆ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಹಳ್ಳಿ ಸೊಗಡಿನ ಮೂಲಕ ಜನಜಾಗೃತಿ ಮೂಡಿಸಿದ್ದರು. ಅಲ್ಲದೆ ವಿನೂತನ ಪ್ರತಿಭಟನೆಗೂ ಇದು ಸಾಕ್ಷಿಯಾಯಿತು.

Advertisement

ಪ್ರತಿಭಟನೆಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಗುರುಗಳು, ಸಮುದಾಯ ಬಾಂಧವರು ಸ್ವಯಂಪ್ರೇರಿತರಾಗಿ ಜೊತೆಯಾಗಿ ಹೆಜ್ಜೆ ಹಾಕಿದರು.

ನಗರ ವಿದ್ಯಾರ್ಥಿಗಳು ಕೂಡ ಸ್ವಯಂಸ್ಫೂರ್ತಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ಹೊರಹಾಕಿದ್ದು ಖ್ಯಾತ ಸಾಹಿತಿ ನಾಡಿಸೋಜ ಮತ್ತು ಧರ್ಮಗುರುಗಳ ಪ್ರಶಂಸೆಗೆ ಪಾತ್ರವಾಯಿತು.

ಮೆರವಣಿಗೆ ಸಾಗುವ ಮಧ್ಯದಲ್ಲಿ ಐತಿಹಾಸಿಕ ಬಿದನೂರು ಕೋಟೆಯ ಮುಂಭಾಗ ಕೆಲಹೊತ್ತು ಕಳೆದು ಶರಾವತಿ ಉಳಿವಿಗಾಗಿ ಘೋಷಣೆ ಕೂಗಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next