ಹೊಸನಗರ: ಮಲೆನಾಡಿಗರ ಬದುಕಿನ ಮೇಲೆ ಸರ್ಕಾರ ದಬ್ಟಾಳಿಕೆ ನಡೆಸುವುದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಗೌರವಾಧ್ಯಕ್ಷ ಖ್ಯಾತ ಸಾಹಿತಿ ನಾ. ಡಿಸೋಜ ಎಚ್ಚರಿಸಿದ್ದಾರೆ.
ತಾಲೂಕಿನ ಬಿದನೂರು ನಗರದಲ್ಲಿ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಪ್ರಸ್ತಾಪವನ್ನು ವಿರೋಧಿಸಿ ನಡೆದ ನಗರ ಹೋಬಳಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸುರಿವ ಮಳೆಯನ್ನು ಲೆಕ್ಕಿಸದೆ ಬಿದನೂರಿನ ಜನ ಬೀದಿಗಿಳಿದು ಸರ್ಕಾರದ ಯೋಜನೆಯ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಇದು ಸಣ್ಣ ವಿಚಾರವಲ್ಲ. ನಿರಂತರವಾಗಿ ಮಲೆನಾಡಿಗರ ಮೇಲೆ ಒಂದಿಲ್ಲೊಂದು ಯೋಜನೆ ಹೇರಿ ದಬ್ಟಾಳಿಕೆ ನಡೆಸುವ ಸರ್ಕಾರಗಳಿಗೆ ಇದು ಎಚ್ಚರಿಕೆಯ ಗಂಟೆ. ಇಂತಹ ಅನ್ಯಾಯಗಳನ್ನು ಇಲ್ಲಿನ ಜನ ಇನ್ನು ಸಹಿಸಿಕೊಳ್ಳಲಾರರು ಎಂಬುದಕ್ಕೆ ಇವತ್ತಿನ ಈ ಅಭೂತಪೂರ್ವ ಜನಬೆಂಬಲವೇ ಸಾಕ್ಷಿ ಎಂದಿದ್ದಾರೆ.
ಸರ್ಕಾರ ವ್ಯರ್ಥ ನೀರನ್ನು ಒಯ್ಯುವುದಾಗಿ ಹೇಳಿದೆ. ಆದರೆ ಲಿಂಗನಮಕ್ಕಿ ಜಲಾಶಯದ ಕೆಳಗೆ ಸುಮಾರು 90 ಹಳ್ಳಿಗಳ ಮೀನುಗಾರರು ಶರಾವತಿ ನದಿಯನ್ನೇ ಅವಲಂಬನೆ ಮಾಡಿಕೊಂಡಿದ್ದಾರೆ. ಅಲ್ಲದೆ ಅಪರೂಪದ ಮೀನು ತಳಿ, ವನ್ಯಜೀವಿಗಳು ಮತ್ತು ಸುತ್ತಮುತ್ತಲಿನ ಕಾಡು ಮತ್ತು ನಾಡನ್ನು ಈ ನದಿ ಪೊರೆಯುತ್ತಿದೆ ಎಂಬುದು ಬೆಂಗಳೂರಿನ ಎಸಿ ರೂಂನಲ್ಲಿ ಕುಳಿತು ಯೋಜನೆ ಸಿದ್ಧಪಡಿಸುವವರಿಗೆ ಗೊತ್ತಾಗಲು ಸಾಧ್ಯವಿಲ್ಲ. ಅವರಿಗೆ ಗೊತ್ತಾಗುವಂತೆ ಮಾಡಲು ಮಲೆನಾಡಿನ ಜನ ಸಿಡಿದೆದ್ದಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ಅರ್ಥಹೀನ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಆಳ್ವಿಕೆಗೆ ಹೆಸರಾಗಿದ್ದು ಬಿದನೂರು: ಮೂಲೆಗದ್ದೆ ಶ್ರೀ ಇತಿಹಾಸದಲ್ಲಿ ಬಿದನೂರು ಆಳ್ವಿಕೆ ತನ್ನದೇ ಮಹತ್ವ ಹೊಂದಿದೆ. ಇಲ್ಲಿ ಕೆಳದಿ ಚೆನ್ನಮ್ಮ ತನ್ನ ಸಮರ್ಥ ಆಳ್ವಿಕೆಯಿಂದ ಹೆಸರು ಮಾಡಿದ್ದಳೆ. ಇದು ಹೋರಾಟದ ನೆಲ. ಇಲ್ಲಿಯ ಜನ ಬಂಡಾಯ ಎದ್ದರೆ ಅದನ್ನು ಎದುರಿಸುವ ತಾಕತ್ತು ಯಾರಿಗೂ ಇರಲಾರದು. ಹಾಗಾಗಿ ಸರ್ಕಾರ ಶರಾವತಿಯ ಒಡಲು ಬಗೆಯುವ ಇಂತಹ ದುಸ್ಸಾಹಸದಿಂದ ಹಿಂದೆ ಸರಿಯುವುದು ಒಳಿತು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಎಚ್ಚರಿಸಿದರು. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದು ಎಚ್ಚರಿಕೆಯ ಗಂಟೆಯಷ್ಟೇ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಪಕ್ಷಬೇಧ ಮರೆತು ಇಲ್ಲಿಯ ಜನರು ಬಿಸಿಮುಟ್ಟಿಸಲಿದ್ದಾರೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸುಲ್ತಾನ ಜುಮ್ಮಾ ಮಸೀದಿ ಗುರುಗಳಾದ ಅಶ್ರಫ್ ಹಿಮಾಮಿ, ವಿಜಯಮಾತೆ ದೇವಾಲಯದ ಫಾದರ್ ಡೇವಿಡ್ ಡೆಲ್ಲಾರಿಯೋ, ಹೋರಾಟ ಸಮಿತಿಯ ಸಂಚಾಲಕ ಪತ್ರಕರ್ತ ಶಶಿ ಸಂಪಳ್ಳಿ, ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್, ಜಿ.ವಿ. ರವೀಂದ್ರ, ತಾಪಂ ಸದಸ್ಯರಾದ ಕೆ.ವಿ. ಸುಬ್ರಹ್ಮಣ್ಯ, ಅಶ್ವಿನಿ ಪಾಟೀಲ್, ಶೋಭಾ ಮಂಜುನಾಥ್ ಮತ್ತಿತರರು ಇದ್ದರು. ಪತ್ರಕರ್ತ ರವಿ ಬಿದನೂರು ಕಾರ್ಯಕ್ರಮ ನಿರ್ವಹಿಸಿದರು.