ಕುಮುದಾ ಬಿದನೂರು
ಹೊಸನಗರ: ಒಂದು ಕಡೆ ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಹರಿಸುವ ವಿವಾದ ಸದ್ದು ಮಾಡುತ್ತಿದೆ. ಆದರೆ ಈ ಭಾಗದ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಮಾತ್ರವಲ್ಲ, ಕೃಷಿ ಪರಿಕರಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ.
ಈ ಹಿಂದೆ ಮಳೆಗಾಲ ಬಂತೆಂದರೆ ಇಡೀ ಮಲೆನಾಡೇ ಮಳೆನಾಡಾಗಿ ಪರಿವರ್ತನೆಗೊಳ್ಳುತ್ತಿತ್ತು. ಸುಮಾರು 3 ತಿಂಗಳು ಸೂರ್ಯನ ಬೆಳಕನ್ನೇ ನೋಡದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ಜೂನ್ ತಿಂಗಳಲ್ಲಿ ಒಂದೇ ಸಮನೆ ಸುರಿಯಬೇಕಿದ್ದ ವರ್ಷಧಾರೆ ಮಾಯವಾಗಿದೆ. ಆಗಲೋ ಈಗಲೋ ನಾಲ್ಕು ಹನಿ ಸುರಿಸಿ ಮರೆಯಾಗುತ್ತಿದೆ. ಇದು ಮಳೆಗಾಲವೋ ಅಥವಾ ಬೇಸಿಗೆಯೇ ಇನ್ನೂ ಮುಂದುವರಿದಿದೆಯೋ ಎನ್ನುವಷ್ಟು ಮಳೆಯ ಕೊರತೆ ಕಂಡು ಬಂದಿದೆ.
ಕಂಬಳಿ ಕೇಳ್ಳೋರಿಲ್ಲ: ಮಳೆಗಾಲ ಬಂತೆಂದರೆ ಇಲ್ಲಿಯ ರೈತರಿಗೆ ಉತ್ತಮ ಕಂಬಳಿ ನೋಡಿ ಖರೀಸುವುದೇ ತುಂಬಾ ಮಹತ್ವದ ಕೆಲಸ. ಕಂಬಳಿ ನೇಯ್ದ ವ್ಯಾಪಾರಸ್ಥರು ಕೂಡ ಹೆಚ್ಚು ಮಳೆ ಬೀಳುವ ಪ್ರದೇಶಕ್ಕೆ ಬಂದು ಕಂಬಳಿ ವ್ಯಾಪಾರ ಮಾಡುವುದೇ ಅವರ ಕಾಯಕವಾಗಿತ್ತು. ಸಂತೆ, ಮಾರುಕಟ್ಟೆಗಳಲ್ಲಿ ಕಂಬಳಿ ವ್ಯಾಪಾರಸ್ಥರೇ ತುಂಬಿರುತ್ತಿದ್ದರು. ಆದರೆ ಈ ಬಾರಿ ಕಂಬಳಿಯನ್ನು ಕೇಳ್ಳೋರಿಲ್ಲ. ಕಂಬಳಿ ವ್ಯಾಪಾರಸ್ಥರಿಗೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ.
ಒಂದೇ ಒಂದು ಕಂಬಳಿ ಹೋಗಿಲ್ಲ: ಸ್ವಾಮಿ, ಬಂದು ಒಂದು ವಾರ ಆಯ್ತು. ಮಳೆಗಾಲ ಅರಂಭದ ಜೂನ್ ತಿಂಗಳು ನೂರಾರು ಕಂಬಳಿ ವ್ಯಾಪಾರ ಆಗುತ್ತಿತ್ತು. ಆದರೆ ಈ ಬಾರಿ ವ್ಯಾಪಾರವೇ ಇಲ್ಲ. ದಿನಕ್ಕೆ ಒಂದು ಕಂಬಳಿಯೂ ವ್ಯಾಪಾರ ಆಗುತ್ತಿಲ್ಲ. ರೈೖತರು ಬಂದರೆ ಮಾತ್ರ ವ್ಯಾಪಾರ ಮಾಡೋದು.. ಮಳೆ ಇಲ್ಲದೆ ರೈತರು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಹೊಳಲ್ಕೆರೆಯಿಂದ ಬಂದ ವ್ಯಾಪಾರಸ್ಥನೊಬ್ಬ ತನ್ನ ಅಳಲು ತೋಡಿಕೊಂಡಿದ್ದಾನೆ.
ಮಳೆಯ ತೀವ್ರ ಕೊರತೆ: ಮಲೆನಾಡ ನಡುಮನೆ ಎಂದೇ ಕರೆಸಿಕೊಳ್ಳುವ ಹೊಸನಗರ ತಾಲೂಕಿನಲ್ಲಿ ಈ ಬಾರಿ ಮಳೆ ವಿರಳವಾಗಿದೆ. ಜೂನ್ ತಿಂಗಳಲ್ಲಿ ಮಳೆನಾಡಾಗಬೇಕಿದ್ದ ಈ ಭಾಗದಲ್ಲಿ ಇನ್ನೂ ಬಿಸಿಲಿನ ಛಾಯೆ ಇದೆ. ಒಂದೇ ದಿನಕ್ಕೆ 25 ಸೆಂ.ಮೀ. ಮಳೆಯಾಗಬೇಕಾದ ಹುಲಿಕಲ್, ಮಾಣಿ, ನಗರ, ಮಾಸ್ತಿಕಟ್ಟೆ, ಯಡೂರು, ಸೇರಿದಂತೆ ಚಕ್ರಾ ಮತ್ತು ಸಾವೇಹಕ್ಲು ಜಲಾಶಯ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿದೆ.