Advertisement

ಭಯ ಹುಟ್ಟಿಸುವ ಸೇತುವೆ ಸಂಚಾರ

11:59 AM May 09, 2019 | Naveen |

ಹೊಸನಗರ: ನೀರಿನ ರಭಸಕ್ಕೆ ಕೊರೆದು ಹೋದ ಪಿಲ್ಲರ್‌.. ಕಾಂಕ್ರೀಟ್ ಕಿತ್ತು ಕಾಣಿಸುತ್ತಿರುವ ತುಕ್ಕು ತಿಂದ ಕಬ್ಬಿಣದ ಸರಳುಗಳು.. ಸಂಪೂರ್ಣ ಶಿಥಿಲಗೊಂಡ ಈ ಸೇತುವೆ ಸಂಚಾರಕ್ಕೆ ಭಯ ಹುಟ್ಟಿಸುವಂತಿದೆ. ಈಗಲೋ ಆಗಲೋ ಎಂಬಂತಿರುವ ಈ ಸೇತುವೆ ಬಗ್ಗೆ ಆತಂಕದಲ್ಲಿದ್ದಾರೆ ಈ ಗ್ರಾಮದ ಜನರು.

Advertisement

ಹೌದು. ಇದು ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಗ್ರಾಮದ ಸಂಪರ್ಕ ಕೊಂಡಿ ಸಂಡೋಡಿ ಸೇತುವೆಯ ದುಸ್ಥಿತಿ ಇದು. ಕೇವಲ ಶಿಥಿಲಗೊಂಡಿರುವುದು ಅಲ್ಲ ಶಿಥಿಲಾವಸ್ಥೆಯ ಪರಮಾವಧಿ ಹಂತಕ್ಕೆ ಈ ಸೇತುವೆ ತಲುಪಿದೆ.

ಕೆಪಿಸಿ ನಿರ್ಮಾಣದ ಸೇತುವೆ: ಲಿಂಗನಮಕ್ಕಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹ ಮಾಡುವ ಉದ್ದೇಶದಿಂದ ನಿರ್ಮಾಣವಾಗಿದ್ದು ಚಕ್ರಾ ಮತ್ತು ಸಾವೇಹಕ್ಲು ಅವಳೀ ಡ್ಯಾಂ. ಸಾವೇಹಕ್ಲು ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ಲಿಂಗನಮಕ್ಕಿಗೆ ಹರಿಸಲು ಚಾನಲ್ ನಿರ್ಮಾಣವಾದ ಕಾರಣ ಹಲವು ಗ್ರಾಮಗಳು ಸಂಪರ್ಕ ವಂಚಿತವಾದವು. ಅದರಲ್ಲಿ ಮಳಲಿ ಗ್ರಾಮ ಕೂಡ ಒಂದು. ಆಗ ನಿರ್ಮಾಣಗೊಂಡಿದ್ದೇ ಈ ಸಂಡೋಡಿ ಸೇತುವೆ. ಸುಮಾರು 70-80ರ ದಶಕದಲ್ಲಿ ಈ ಯೋಜನೆ ಜಾರಿಗೊಂಡಿದ್ದು ಸೇತುವೆ ಕೂಡ 35 ರಿಂದ 40 ವರ್ಷ ಹಳೆಯದು.

ಶಿಥಿಲಗೊಂಡ ಸೇತುವೆ: ಮಳಲಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುಮಾರು 500 ಕುಟುಂಬಗಳಿಗೆ ಸಂಡೋಡಿ ಸೇತುವೆಯೊಂದೇ ಸಂಪರ್ಕ ಸೇತು. ಆದರೆ ಕಳೆದ ಹತ್ತು ವರ್ಷದಿಂದ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಕೆಳಭಾಗದಿಂದ ನೋಡಿದರೆ ಒಮ್ಮೆಲೆ ಗಾಬರಿ ಹುಟ್ಟಿಸುತ್ತದೆ ಅಲ್ಲಿಯ ಚಿತ್ರಣ. ಕಾಂಕ್ರೀಟ್ ಸಂಪೂರ್ಣ ಕಿತ್ತು ಹೋಗಿ ಕಬ್ಬಿಣದ ಸರಳುಗಳು ತುಕ್ಕು ತಿಂದ ಸ್ಥಿತಿಯಲ್ಲಿ ಕಣ್ಣಿಗೆ ರಾಚುತ್ತದೆ. ಸೇತುವೆ ಪಿಲ್ಲರ್‌ ಒಂದು ಭಾಗದಲ್ಲಿ ಸುಮಾರು 2ರಿಂದ 3 ಅಡಿಯಷ್ಟು ಒಳಗೆ ಕೊರೆದು ಹೋಗಿದೆ. ಇನ್ನು ಸೇತುವೆ ಮೇಲ್ಭಾಗದಿಂದ ಹೊಂಡ ಬಿದ್ದಿದೆ. ಸೇತುವೆ ಮೇಲಿನ ಪಯಣ ಅಪಾಯಕ್ಕೆ ರಹದಾರಿ ಎಂಬಂತಾಗಿದೆ.

ಮನವಿಗೆ ಬೆಲೆ ಇಲ್ಲ: ಸಂಡೋಡಿ ಸೇತುವೆ ಕುಸಿದರೆ ಮಜರೆ ಹಳ್ಳಿಗರ ಸುಮಾರು 500 ಕುಟುಂಬಗಳು ಸಂಪರ್ಕದಿಂದ ದೂರ ಉಳಿಯುತ್ತವೆ. ಮಳಲಿ ಗ್ರಾಮದ ಜನರಿಗೆ ಹೋಬಳಿ ಕೇಂದ್ರ ನಗರಕ್ಕೆ ಸಂಪರ್ಕಿಸಲು ಸಂಡೋಡಿ ಸೇತುವೆ ಅನಿವಾರ್ಯ. ಹಾಗಾಗಿ ಸೇತುವೆ ದುಸ್ಥಿತಿ ಜನರಲ್ಲಿ ಸಹಜವಾಗಿ ಆತಂಕ ತಂದೊಡ್ಡಿದೆ.

Advertisement

ಜಲಾಶಯ ನಿರ್ಮಾಣ ಮಾಡುವಾಗ ಹಲವಾರು ಭರವಸೆ ನೀಡಿ ಯೋಜನೆ ಸಾಕಾರ ಮಾಡಿಕೊಂಡ ಕರ್ನಾಟಕ ವಿದ್ಯುತ್‌ ನಿಗಮ ನಂತರ ನಿರ್ಲಕ್ಷ್ಯ ತೋರಿದೆ. ಸಂಡೋಡಿ ಸೇತುವೆ ಬಗ್ಗೆ ಕೂಡ ಕೆಪಿಸಿಗೆ ಮಾಹಿತಿ ನೀಡಲಾಗಿದೆ. ಮಾತ್ರವಲ್ಲ, ಹೊಸ ಸೇತುವೆ ನಿರ್ಮಾಣಕ್ಕೆ ಮನವಿಯನ್ನು ಹಲವು ಬಾರಿ ಮಾಡಲಾಗಿದೆ. ಆದರೆ ಈವರೆಗೆ ಮನವಿ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಕೆಪಿಸಿ ಇನ್ನಾದರೂ ಎಚ್ಚೆತ್ತು ಸೇತುವೆ ಬಗ್ಗೆ ಗಮನ ಹರಿಸಲಿ. ಇಲ್ಲವಾದಲ್ಲಿ ದುರಂತ ಸಂಭವಿಸಿದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ್ದಾರೆ.

ಸಂಡೋಡಿ ಸೇತುವೆ ಅಪಾಯದ ಅಂಚಿಗೆ ತಲುಪಿಲುವುದು ಸೇತುವೆ ನೋಡಿದಾಕ್ಷಣ ಎಂತವರಿಗೂ ಅರಿವಾಗುತ್ತದೆ. ಇದೇ ಸೇತುವೆ ಮೇಲೆ ಶಾಲಾ- ಕಾಲೇಜು ಮಕ್ಕಳು ದಿನಂಪ್ರತಿ ನಡೆದು ಹೋಗಬೇಕು. ಸೇತುವೆ ಕುಸಿದು ಅಪಾಯ ಎದುರಾಗುವ ಮುನ್ನ ಕೆಪಿಸಿ ಎಚ್ಚೆತ್ತುಕೊಳ್ಳಬೇಕಿದೆ. ಮಳಲಿ ಗ್ರಾಮದ ಜನರ ಆತಂಕವನ್ನು ದೂರ ಮಾಡಬೇಕಿದೆ.

ಕುಮುದಾ ಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next