Advertisement

ಶರಾವತಿ ನದಿ ನೀರು ಬಿಡುವ ಪ್ರಶ್ನೆಯೇ ಇಲ್ಲ

12:19 PM Jul 13, 2019 | Team Udayavani |

ಹೊಸನಗರ: ನಮ್ಮ ಜೀವನದಿ ಶರಾವತಿ ನೀರು ಬೆಂಗಳೂರಿಗಲ್ಲ. ಅವಳು ನಮ್ಮ ಮಲೆನಾಡಿಗೆ ಮಾತ್ರ ಮೀಸಲು. ಯಾವತ್ತೂ ಶರಾವತಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಶರಾವತಿ ನದಿ ಮುಟ್ಟುವ ಮುನ್ನ, ನಮ್ಮನ್ನು ಮುಟ್ಟಿ ಎಂದು ಘೋಷಣೆ ಕೂಗುತ್ತ ಪಟ್ಟಣದ ಗುರೂಜಿ ಇಂಟರ್‌ನ್ಯಾಶನಲ್ ಶಾಲಾ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ರ್ಯಾಲಿ ನಡೆಸಿ ಗಮನ ಸೆಳೆದರು.

Advertisement

ಶರಾವತಿ ನಮ್ಮ ತಾಯಿ. ಅವಳನ್ನು ನಂಬಿ ಸಾವಿರಾರು ಕುಟುಂಬವಿದೆ. ಅವಳ ಮಕ್ಕಳಾದ ನಾವು ಯಾವತ್ತೂ ಹೇಡಿಯಲ್ಲ. ರಕ್ತವನ್ನಾದರೂ ಕೊಟ್ಟೇವು. ತಾಯಿ ಶರಾವತಿಯ ಒಂದು ಹನಿ ನೀರು ಕೊಡೋಲ್ಲ. ಅನ್ನ ಬಿಟ್ಟೇವು ಆದರೆ ನೀರು ಕೊಡೋಲ್ಲ ಎಂಬ ಧೀರೋದಾತ್ತ ಘೋಷಣೆ ಕೂಗುತ್ತಾ ಕಳೂರು ಗ್ರಾಮದ ಶಾಲಾ ಆವರಣದಿಂದ ಪ್ರತಿಭಟನಾ ಜಾಥಾ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪ್ರತಿಭಟನಾ ಮೆರವಣಿಗೆ ನಂತರ ತಾಲೂಕು ಕಚೇರಿಯಲ್ಲಿ ಸಮಾ ವೇಶಗೊಂಡ ವಿದ್ಯಾರ್ಥಿಗಳು ಸರ್ಕಾರದ ಯೋಜನೆಯನ್ನು ಖಂಡಿಸಿ ತಮ್ಮ ಹಕ್ಕೊತ್ತಾಯ ಪ್ರಕಟಿಸಿ ಮನವಿ ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡ ಪ್ರಮೋದ್‌ ಮಾತನಾಡಿ, ಯೋಜನೆ ಜನ ವಿರೋಧಿಯಾಗಿದೆ. ಈಗಾಗಲೇ ಶರಾವತಿ ನದಿಗೆ ಸಾಕಷ್ಟು ಅಣೆಕಟ್ಟು ಕಟ್ಟಿ ಅದರ ಅಸ್ತಿತ್ವಕ್ಕೆ ಧಕ್ಕೆ ತರಲಾಗಿದೆ. ಇದರ ಪರಿಣಾಮ ನದಿ ನಂಬಿ ಬದುಕಿದ್ದ ಸಾವಿರಾರು ಕುಟುಂಬ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದೆ. ಮತ್ತೆ ಯೋಜನೆಗೆ ಅವಕಾಶ ಬೇಡ. ನಮ್ಮನ್ನು ಕೆಣಕಬೇಡಿ. ನಮ್ಮ ರಕ್ತವನ್ನು ಒತ್ತೆ ಇಡುತ್ತೇವೆ. ಆದರೆ ತಾಯಿ ಶರಾವತಿ ನದಿ ನೀರು ಕೊಡೋಲ್ಲ ಎಂದು ಎಚ್ಚರಿಸಿದರು.

ತಾಪಂ ಅಧ್ಯಕ್ಷ ವಾಸಪ್ಪ ಗೌಡ ಮಾತನಾಡಿ, ಸರ್ಕಾರದ ಪ್ರಸ್ತಾವಿತ ಶರಾವತಿ ಯೋಜನೆಯಿಂದ ಮಲೆನಾಡಿಗರ ಮುಗ್ದ ಮನಸ್ಸು ನೊಂದಿದೆ ಎಂಬುದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಆಕ್ರೋಶಭರಿತ ಮಾತುಗಳೇ ಸಾಕ್ಷಿಯಾಗಿವೆ. ಕಾರ್ಯಸಾಧುವಲ್ಲದ ಯೋಜನೆಯನ್ನು ಸರ್ಕಾರ ಕೈ ಬಿಡಲೇಬೇಕು ಎಂದು ಒತ್ತಾಯಿಸಿದರು. ಚಲನಚಿತ್ರ ನಟ ಏಸು ಪ್ರಕಾಶ್‌, ಹೋರಾಟಗಾರರಾದ ಮಂಜುನಾಥ ಬ್ಯಾಣದ್‌, ಅಭಿಲಾಷ್‌, ಬಿ.ಎಸ್‌. ಸುರೇಶ್‌ ಮತ್ತಿತರರು ಮಾತನಾಡಿದರು. ಗುರೂಜಿ ಸಂಸ್ಥೆ ಅಧ್ಯಕ್ಷ ಸುದೇಶ ಕಾಮತ್‌, ಪ್ರಾಂಶುಪಾಲ ರಾಘವೇಂದ್ರ ಭಟ್, ಕಾರ್ಯದರ್ಶಿ ಸಂಕೂರು ಶಾಂತಮೂರ್ತಿ, ನಾಗೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next