ಹೊಸನಗರ: ಇಂದು ಕಾಡಿನ ಬಯಲು ಪ್ರದೇಶದಲ್ಲಿ ನವಿಲನ್ನು ಕಾಣುವುದು ಅಪರೂಪ. ಆದರೆ ನೋಡನೋಡುತ್ತಲೇ ಪೇಟೆ ರಸ್ತೆಯಲ್ಲಿ ನವಿಲಿನ ಸವಾರಿ ಬಂದರೆ ಹೇಗೆ. ಹೌದು ಇಂತಹದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ನವಿಲು ಎಲ್ಲರ ಗಮನ ಸೆಳೆದಿದೆ.
ಹೌದು, ಇದು ನಡೆದಿದ್ದು ತಾಲೂಕಿನ ನಗರದ ಚಿಕ್ಕಪೇಟೆ ಸರ್ಕಲ್ನಲ್ಲಿ. ಮುಸ್ಸಂಜೆ ಹೊತ್ತಲ್ಲಿ ಡಾಂಬರ್ ರಸ್ತೆ ಮೇಲೆ ಯಾವುದೇ ಹಂಗಿಲ್ಲದೆ ಮಯೂರವೊಂದು ರಾಜ ಗಾಂಭೀರ್ಯದಲ್ಲಿ ನಡಯುವಾಗ ಸ್ಥಳೀಯರು ಒಮ್ಮೆ ಅವಾಕ್ಕಾದರು. ಯಾವುದೇ ಹಂಗಿಲ್ಲ. ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಗೂ ಕ್ಯಾರೇ ಮಾಡದ ಆ ನವಿಲು ಸಂಜೆ ವಿಹಾರದಂತೆ ನಡೆದು ಹೋಗುತ್ತಲೇ ಇತ್ತು. ಅಕ್ಕಪಕ್ಕ ಅಂಗಡಿಯತ್ತ ಬಂದು ಕುಡಿನೋಟ ಬೀರಿ ಮತ್ತೆ ತನ್ನ ದಾರಿಯಲ್ಲಿ ಸಾಗುತ್ತಿದ್ದ ನವಿಲು ಎಲ್ಲರನ್ನು ಆಕರ್ಷಿಸಿದೆ.
ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್!: ಯಾವುದೇ ಅಳುಕು ಅಂಜಿಕೆಯಿಲ್ಲದ ರಾಷ್ಟ್ರಪಕ್ಷಿಯ ನಡೆಯನ್ನು ಕಂಡ ಸುತ್ತಮುತ್ತಲಿನವರು ತಮ್ಮ ಮೊಬೈಲ್ನಲ್ಲಿ, ಕ್ಯಾಮೆರಾದಲ್ಲಿ ಹತ್ತಿರ ಬಂದು ಫೋಟೋ ತೆಗೆಯುತ್ತಿದ್ದರೂ ಮುಜುಗರ ಪಡದ ನವಿಲು ತರತರ ಭಂಗಿಯ ಪೋಸ್ ಕೊಟ್ಟು ಅವರನ್ನು ಖುಷಿಪಡಿಸಿತ್ತು.
ನಗರದ ಚಿಕ್ಕಪೇಟೆ ಸರ್ಕಲ್ ಸ್ವಲ್ಪಮಟ್ಟಿನ ಜನನಿಬಿಡ ಪ್ರದೇಶ. ನವಿಲು ಕೂಡ ನಗರವಾಸಿಯಂತೆ ಗಾಂಭೀರ್ಯದಲ್ಲೇ ಸಂಜೆಯ ವಿಹಾರ ಮಾಡಿದ್ದು ಸ್ಥಳೀಯರ ರೋಮಾಂಚನಕ್ಕೆ ಕಾರಣವಾಗಿತ್ತು. ಸಂಜೆಯ ವಿಹಾರದ ನಂತರ ಮನೆಗಳ ಮೇಲ್ಛಾವಣಿ ಹಾರುತ್ತಾ ಕತ್ತಲು ಆವರಿಸುವ ತನಕ ಚಿಕ್ಕಪೇಟೆಯ ಸುತ್ತಮುತ್ತಲೂ ಕಂಡಬಂದ ನವಿಲು ನಂತರ ಕಣ್ಮರೆಯಾಯಿತು.
ಇದ್ದಕ್ಕಿದ್ದಂತೆ ಪ್ರತ್ಯಕ್ಷ ವಾದ ನವಿಲಿನ ಓಡಾಟ ನೋಡಿ. ಇದು ಯಾರೋ ಸಾಕಿರುವ ನವಿಲು ಇರಬಹುದು ಎಂಬುದು ಕೆಲವರ ಉದ್ಗಾರವಾದರೆ.. ಇಲ್ಲ ಇಲ್ಲ ರಾಷ್ಟ್ರಪಕ್ಷಿಯನ್ನು ಹಾಗೆ ಸಾಕುವಂತಿಲ್ಲ ಎಂಬ ಚರ್ಚೆಗೂ ಕಾರಣವಾಗಿತ್ತು. ಒಟ್ಟಾರೆ ನವಿಲಿನ ರಾಜಗಾಂಭೀರ್ಯ ರಾಜಬೀದಿಯ ಸಂಜೆಯ ವಿಹಾರ ಗಮನ ಸೆಳೆದಿದ್ದು ಮಾತ್ರವಲ್ಲ, ಸೋಜಿಗಕ್ಕೂ ಕಾರಣವಾಗಿತ್ತು.
ಸಂಜೆ ವೇಳೆಗೆ ಚಿಕ್ಕಪೇಟೆ ಸರ್ಕಲ್ ವೇಳೆ ಪ್ರತ್ಯಕ್ಷವಾದ ನವಿಲು ಹಾಗೇ ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದೇ ಬರುತ್ತಿತ್ತು. ಜನರು ಕೂಡ ವಿಶೇಷವಾಗಿ ಗಮನಿಸುತ್ತಿದ್ದರು. ಹತ್ತಿರ ಹೋಗಿ ಫೋಟೋ ತೆಗೆಯುವಾಗಲೂ ಅಂಜದೇ ತಾನು ನಡೆದಿದ್ದೇ ದಾರಿ ಎಂಬಂತೆ ಸಾಗುತ್ತಿದ್ದ ನವಿಲುಸೋಜಿಗ ಉಂಟು ಮಾಡಿತ್ತು.
•
ನಾಗೇಂದ್ರ,
ಬೆನಕ ಫೋಟೋ ಸ್ಟುಡಿಯೋ