ಕುಮುದಾ ನಗರ
ಹೊಸನಗರ: ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಕೂಪವಾಗಿ ಮಾರ್ಪಟ್ಟಿದೆ. ರಸ್ತೆ ತಿರುವಿನ ಪಕ್ಕದಲ್ಲಿರುವ ಪ್ರಪಾತಕ್ಕೆ ಅಡ್ಡಲಾಗಿ ಬೇಲಿ ಗೂಟ ನೆಟ್ಟು ಅಪಹಾಸ್ಯಕ್ಕೂ ಈಡಾಗಿದೆ. ಈ ಹೆದ್ದಾರಿ ಅವ್ಯವಸ್ಥೆ ಕಂಡುಬಂದಿದ್ದು ಹೊಸನಗರದಿಂದ ನಗರಕ್ಕೆ ಸಾಗುವ ಮಾರ್ಗಮದ್ಯದ ಹಿಲ್ಕುಂಜಿ ಪ್ರದೇಶದಲ್ಲಿ. ಹೊನ್ನಾಳಿ- ಬೈಂದೂರು
ರಾಜ್ಯ ಹೆದ್ದಾರಿಯಿಂದ ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ (766ಸಿ)ಯಾಗಿ ಮಾರ್ಪಾಡುಗೊಂಡ ಮೇಲೆ ನಿರ್ವಹಣೆ ಇಲ್ಲದೆ ಅಪಘಾತ ಕೂಪವಾಗಿ ಕಂಡುಬಂದಿದೆ.
ಪ್ರಮುಖ ಹೆದ್ದಾರಿ ಮಾರ್ಗ: ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಮಲೆನಾಡು- ಕರಾವಳಿಯನ್ನು ಬೆಸೆಯುವ ಪ್ರಮುಖ ಮಾರ್ಗ. ಹುಲಿಕಲ್ ಘಾಟಿ ಮತ್ತು ಕೊಲ್ಲೂರು ಘಾಟಿ ಮೂಲಕ ದಕ್ಷಿಣ ಕನ್ನಡ, ಉಡುಪಿಗೆ ತೆರಳುವ ವಾಹನಗಳು ಈ ಹೆದ್ದಾರಿಯಲ್ಲೇ ಸಂಚರಿಸಬೇಕು. ಆದರೆ ನಿರ್ವಹಣೆ ಇಲ್ಲದೆ ಹೊಸನಗರದಿಂದ ನಗರಕ್ಕೆ ತೆರಳುವುದಂತೂ ವಾಹನ ಸವಾರರಿಗೆ ದೊಡ್ಡ ಸವಾಲು ಎಂಬಂತಾಗಿದೆ.
ನಿರ್ವಹಣೆ ಇಲ್ಲ: ಹಿಲ್ಕುಂಜಿ ಭಾಗದ ತಿರುವಿನ ಪಕ್ಕದಲ್ಲೇ ಪ್ರಪಾತವಿದೆ. ಅಲ್ಲದೆ ಅಪಾಯಕಾರಿ ತಿರುವು ಮಾತ್ರವಲ್ಲದೆ ಗುಡ್ಡ ಏರಿದ ರೀತಿಯಲ್ಲಿ ರಸ್ತೆಯ ಸ್ಟ್ರಚರ್ ಇದೆ. ಇಲ್ಲಿ ಅಪಘಾತಗಳು ಕೂಡ ಮಾಮಾಲಿ ಎಂಬಂತಾಗಿದೆ. ಹಿಲ್ಕುಂಜಿ ಅಪ್ ಹತ್ತಲಾಗದೆ ಬೃಹತ್ ಹತ್ತು ಚಕ್ರದ ವಾಹನಗಳು ಇಲ್ಲೇ ಟೆಂಟ್ ಹಾಕುವುದು ಕೂಡ ಅನಿವಾರ್ಯ. ಅಪಾಯಕ್ಕೆ ಆಹ್ವಾನಿಸುತ್ತಿರುವ ಪ್ರಪಾತಕ್ಕೆ ಅಡ್ಡಲಾಗಿ ಬೇಲಿಗೂಟ ನೆಟ್ಟು ಬೇಜವಾಬ್ದಾರಿ ಕೆಲಸವನ್ನು ನಿರ್ವಹಿಸಲಾಗಿದ್ದು ಕಂಡುಬಂದಿದೆ. ಆದರೆ ಅಧಿಕಾರಿಗಳಿಗೆ ಹೇಳಿದರೆ ಜಾಣ ಕುರುಡು ನೀತಿ ತೋರ್ಪಡಿಸುತ್ತಾರೆ ಎಂಬುದು ಸ್ಥಳೀಯರ ಆರೋಪ.
ಗಿಡಗಂಟಿಗಳದ್ದೆ ರಾಜ್ಯಭಾರ: ಇದು ಹೇಳಿಕೊಳ್ಳೋಕೆ ಮಾತ್ರ ರಾಷ್ಟ್ರೀಯ ಹೆದ್ದಾರಿ. ನಿರ್ವಹಣೆಗೆ ಬರುವ ಹಣ ಎಲ್ಲಿ ಮಂಗಮಾಯವಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಹೆದ್ದಾರಿಯಲ್ಲಿ ಎಲ್ಲಿ ನೋಡಿದರೂ ಹೊಂಡಗುಂಡಿ. ಇನ್ನು ಹೆದ್ದಾರಿಯಲ್ಲಿ ಬರುವ ಸೇತುವೆಗಳನ್ನು ಗಿಡಗಂಟಿಗಳು ಆಕ್ರಮಿಸಿಕೊಂಡು ಸೇತುವೆಯನ್ನು ಶಿಥಿಲಗೊಳಿಸುತ್ತಿವೆ. ಇದಕ್ಕೆ ತಾಲೂಕಿನ ನಗರದಲ್ಲಿರುವ ಪ್ರಮುಖ ಸೇತುವೆ ಸಾಕ್ಷಿ ಎಂಬಂತಿದೆ.
ಸಾವಿರಾರು ವಾಹನಗಳ ಸಂಚಾರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಹುಲಿಕಲ್ ಮತ್ತು ಕೊಲ್ಲೂರು ಘಾಟ್ ರಸ್ತೆ ಮೂಲಕ ಬರುವ ಬೃಹತ್ ಲಾರಿಗಳು, ಸರ್ವಿಸ್ ಬಸ್ಸುಗಳು ಇದೇ ಹೆದ್ದಾರಿಯನ್ನು ಬಳಸಿ ಶಿವಮೊಗ್ಗ, ಸಾಗರ ಸಂಪರ್ಕಿಸಬೇಕು. ಅಲ್ಲದೆ ಶ್ರೀ ಕ್ಷೇತ್ರ ಸಿಗಂದೂರು, ಕೊಲ್ಲೂರು, ಕೊಡಚಾದ್ರಿ ಸೇರಿದಂತೆ ಪ್ರಮುಖ ಯಾತ್ರಾಸ್ಥಳಗಳಿಗೂ ಇದೇ ಕೊಂಡಿ. ಹಗಲಲ್ಲಿ ಏನೋ ಸುಧಾರಿಸಿಕೊಂಡು ಕಷ್ಟಪಟ್ಟು ಹೋಗಬಹುದು. ರಾತ್ರಿ ವೇಳೆ ತುಸು ಕಷ್ಟವೇ ಸರಿ. ಅಲ್ಲದೆ ಹಿಲ್ಕುಂಜಿ ತಿರುವಿನಲ್ಲಿ ದೊಡ್ಡ ವಾಹನಗಳು ಆಗಾಗ್ಗೆ ಸ್ಥಗಿತಗೊಳ್ಳುವುದರಿಂದ ಸಣ್ಣ ಪುಟ್ಟ ವಾಹನಗಳು ಸಂಪರ್ಕಕ್ಕೆ ಪರದಾಡುವ ಸ್ಥಿತಿ ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ತಾಂತ್ರಿಕ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಇಷ್ಟೊಂದು ಗಬ್ಬೆದ್ದು ಹೋಗಿದ್ದರೂ ಹೆದ್ದಾರಿ ಅಧಿಕಾರಿಗಳು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪ್ರಶ್ನೆ ಮಾಡಿದರೆ ಟೆಂಡರ್ ಸಮಸ್ಯೆ ಅಂತಾರೆ. ಅದನ್ನು ಕಟ್ಟಿಕೊಂಡು ನಾವೇನು ಮಾಡಬೇಕು. ಅಲ್ಲದೆ ಹಿಲ್ಕುಂಜಿ ತಿರುವಿನಲ್ಲಿ ತಡೆಗೋಡೆಗೆ ಸಾಕಷ್ಟು ವರ್ಷದಿಂದ ಬೇಡಿಕೆ ಇದೆ. ಅದಕ್ಕೂ ಸ್ಪಂದನೆ ಇಲ್ಲ. ಹೆದ್ದಾರಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ.
ಚಂದ್ರಶೇಖರ ಶೆಟ್ಟಿ,
ಚಿಕ್ಕಪೇಟೆ, ಕರವೇ ಪ್ರಮುಖ