Advertisement

ಬೆಳಕಿಗಾಗಿ ತ್ಯಾಗ ಮಾಡಿದವರ ಬದುಕೇ ಕತ್ತಲೆ!

12:29 PM May 19, 2019 | Naveen |

ಹೊಸನಗರ: ಇದು ಐದು ಜಲಾಶಯಗಳನ್ನು ತನ್ನೊಳಗೆ ಹುದುಗಿಸಿಕೊಂಡ ಹೋಬಳಿಯೊಂದರ ದಾರುಣ ಕತೆ. ನಾಡಿನ ಪ್ರಮುಖ ಜಲಾಶಯವೊಂದರ ಹಿನ್ನೀರಿನ ಆಶ್ರಯ ತಾಣ ಈ ಹೋಬಳಿ. ನಾಡಿಗೆ ಬೆಳಕು ನೀಡಲು ತಮ್ಮ ಮನೆ, ಜಮೀನು ಎಲ್ಲವನ್ನೂ ತ್ಯಾಗ ಮಾಡಿದ ಈ ಹೋಬಳಿ ಜನರ ಬದುಕು ಮಾತ್ರ ಕತ್ತಲೆಯಾಗಿದೆ. ತಮ್ಮ ಹಕ್ಕಿಗಾಗಿ ಇಂದಿಗೂ ಹೋರಾಟ ನಡೆಸಿರುವ ಇವರ ಕೂಗು ಅಕ್ಷರಶಃ ಅರಣ್ಯ ರೋದನವಾಗಿದೆ.

Advertisement

ತಾಲೂಕಿನ ನಗರ ಹೋಬಳಿಯ ಇಂದಿನ ದೈನೇಸಿ ಸ್ಥಿತಿ ಇದು. ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿಯ ಹಿನ್ನಿರಿನ ಜೀವಾಳವಾಗಿರುವ ಈ ಹೋಬಳಿಯಲ್ಲಿ ಆಗುವ ವ್ಯಾಪಕ ಮಳೆಯೇ ಶರಾವತಿ ವಿದ್ಯುದಾಗಾರದ ಶಕ್ತಿ. ಅಷ್ಟೇ ಅಲ್ಲ ವಾರಾಹಿ ಯೋಜನೆಯ ಮಾಣಿ, ಪಿಕಪ್‌, ಖೈರಗುಂದ, ಚಕ್ರಾ ಮತ್ತು ಸಾವೇಹಕ್ಲು ಸೇರಿ ಐದು ಡ್ಯಾಂಗಳೂ ಇಲ್ಲಿಯೇ ಇವೆ. ದೇಶದ ಪ್ರತಿಷ್ಠಿತ ವಾರಾಹಿ ಭೂಗರ್ಭ ವಿದ್ಯುದಾಗಾರ ಕೂಡ ಇದೆ ನಗರ ಹೋಬಳಿಯ ನಿಡಗೊಡು ಗ್ರಾಮದಲ್ಲಿದೆ. ನಾಡಿನ ಬೆಳಕಿಗಾಗಿ ಇಷ್ಟೆಲ್ಲ ಯೋಜನೆಗಳಿಗೆ ತಮ್ಮ ಜಮೀನು, ಮನೆಯನ್ನೆಲ್ಲ ತ್ಯಾಗ ಮಾಡಿದ ಇಲ್ಲಿನ ಜನ ಮಾತ್ರ ಇಂದಿಗೂ ನಲುಗುತ್ತಲೇ ಇದ್ದಾರೆ. ಅರಣ್ಯ ಹಕ್ಕು ಕಾಯ್ದೆ ಇವರ ಬದುಕಿನ ಮೂಲಕ್ಕೇ ಕೊಡಲಿ ಪೆಟ್ಟು ನೀಡಿದೆ.

ಪರಿಹಾರ ಮರೀಚಿಕೆ: ರಾಜ್ಯದಲ್ಲಿ ಅತೀ ಹೆಚ್ಚು ಜಲಾಶಯಗಳನ್ನು ಹೊಂದಿರುವ ಇಲ್ಲಿ ಯೋಜನೆಗಳ ಅನುಷ್ಠಾನ ಸಮಯದಲ್ಲಿ ಮೂಲ ಸೌಕರ್ಯ, ಪರಿಹಾರ, ಕುಟುಂಬಕ್ಕೊಂದು ಉದ್ಯೋಗ, ಪುನರ್ವಸತಿ ಹೀಗೆ ಭರವಸೆಗಳೇ ಹರಿದು ಬಂದವು. ಹೀಗಾಗಿ ನಗರ ಅಕ್ಷರಶಃ ಹಿನ್ನೀರಿನ ಆವಾಸ ಸ್ಥಾನವಾಯಿತು. ಇಲ್ಲಿ ಸುರಿಯುವ ವ್ಯಾಪಕ ಮಳೆ ನೀರು ಸಂಗ್ರಹದಿಂದ ರಾಜ್ಯದ ಶೇ. 30 ರಷ್ಟು ವಿದ್ಯುತ್‌ ಸರಬರಾಜು ಮಾಡುವ ಲಿಂಗನಮಕ್ಕಿ ವಿದ್ಯುದಾಗಾರದ ಯೋಜನೆಯೂ ಸಾರ್ಥಕವಾಯಿತು. ಇದರ ಬೆನ್ನಲ್ಲೇ ವಾರಾಹಿ ಯೋಜನೆಯೂ ಸಾಕಾರಗೊಂಡಿತು. ಆದರೆ ಇವೆಲ್ಲ ಆಗಿ ಐದು ದಶಕಗಳೇ ಕಳೆದರೂ ಜನರಿಗೆ ಕೊಟ್ಟ ಭರವಸೆಗಳು ಮಾತ್ರ ಈಡೇರಿಲ್ಲ.

ಬದುಕಿಗಾಗಿ ಪರದಾಟ: ನಾಡಿಗೆ ಬೆಳಕು ನೀಡುವ ಹೆಗ್ಗಳಿಕೆಯೊಂದಿಗೆ ನಗರ ಹೋಬಳಿಯ ಜನ ಹೆಜ್ಜೆಹೆಜ್ಜೆಗೂ ನೋವು, ದುಗುಡ, ಸಮಸ್ಯೆ, ಪರದಾಟ ಅನುಭವಿಸುತ್ತಲೇ ಇದ್ದಾರೆ. ಕರ್ನಾಟಕ ವಿದ್ಯುತ್‌ ನಿಗಮದ ಯೋಜನೆ ಸಾಕಾರಗೊಳ್ಳುವ ಹೊತ್ತಿನಲ್ಲಿ ಅಷ್ಟೋ ಇಷ್ಟೋ ಜನ ಪರಿಹಾರ ಪಡೆದು ಜನರು ವಲಸೆ ಹೋದರು. ಆದರೆ ಅವರಿಗೆ ಪುನರ್ವಸತಿ ಎಂಬುದು ಇಂದಿಗೂ ಗಗನ ಕುಸುಮ.

ಭೂಮಿ ಖಾತೆ ಇದ್ದವರಿಗೆ ಒಂದಷ್ಟು ಪರಿಹಾರ. ಆದರೆ, ಕೃಷಿಯನ್ನೇ ಅವಲಂಬಿಸಿದ್ದ ನೂರಾರು ಕುಟುಂಬಗಳು ಅಂದೇ ಬೀದಿಗೆ ಬಂದಿದ್ದವು. ಅವೈಜ್ಞಾನಿಕ ಪರಿಹಾರ ನೀತಿ ನೂರಾರು ಕುಟುಂಬಗಳ ಬದುಕನ್ನೇ ಹೊಸಕಿ ಹಾಕಿತು. ತಲತಲಾಂತರದಿಂದ ಬದುಕಿ ಬಾಳಿದ ಪರಿಸರ ಬಿಟ್ಟು ಹೋಗಲಾಗದೆ ಹಿನ್ನೀರ ದಂಡೆಯ ಮೇಲೆ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು ಇಂದಿಗೂ ಕಣೀ¡ರಲ್ಲಿ ಕೈ ತೊಳೆದುಕೊಳ್ಳುತ್ತಿವೆ. ಬದುಕಿನ ಭದ್ರತೆಗೆ ಏನಾದರೂ ಸಿಕ್ಕೀತು ಎಂದು ಕಷ್ಟಪಟ್ಟು ಬದುಕು ನಡೆಸಿಕೊಂಡು ಬಂದಿವೆ. ಆದರೆ ಇವರಿಗೂ ಭೂಮಿ ಹಕ್ಕುಪತ್ರ ನೀಡುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಗಾಯದ ಮೇಲೆ ತುಪ್ಪ ಸವರಿದಂತಾಗಿದೆ.

Advertisement

ಏನದು ಅರಣ್ಯ ಹಕ್ಕು ಕಾಯ್ದೆ: ತಾವು ವಾಸಿಸುತ್ತಿರುವ ಭೂಮಿಯ ಮೇಲೆ ಯಾವುದೇ ಹಿಡಿತವಿಲ್ಲದ ಕುಟುಂಬಗಳಿಗೆ ಭೂಮಿಯ ಹಕ್ಕುಪತ್ರ ನೀಡುವ ಸಂಬಂಧ ಅರಣ್ಯ ಹಕ್ಕು ಕಾಯ್ದೆಯಡಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಅದಕ್ಕೆ ತಾವು ವಾಸಿಸುವ ಭೂಮಿಯ 75 ವರ್ಷದ ದಾಖಲೆಗಳನ್ನು ಸಲ್ಲಿಸಿದರೆ ಹಕ್ಕುಪತ್ರ ಪಡೆದುಕೊಳ್ಳಬಹುದು. ಆದರೆ 75 ವರ್ಷದ ಸಾಕ್ಷಿಗಳನ್ನು ಎಲ್ಲಿಂದ ತರುವುದು ಎಂಬುದೇ ಇಲ್ಲಿಯ ಜನರ ಸಮಸ್ಯೆಯಾಗಿದೆ.

ನಗರ ಹೋಬಳಿ ಬಗ್ಗೆ ತಾತ್ಸಾರ: ನಗರ ಹೋಬಳಿ ಮುಳುಗಡೆ ಪ್ರದೇಶವಾಗಿರುವ ಕಾರಣ 75 ವರ್ಷದ ಸಾಕ್ಷಾಧಾರ ಅಸಾಧ್ಯ. ಕಾನೂನಿನಲ್ಲಿರುವ ಕಲಂ4/8ರಲ್ಲಿ ವಿಫುಲ ಅವಕಾಶವಿದ್ದರೂ ಕೂಡ ನಿರಾಕರಿಸಲಾಗುತ್ತಿದೆ. ಐತಿಹಾಸಿಕ ಅನ್ಯಾಯಗಳನ್ನು ನೀಗಿಸುವ ನಿಟ್ಟಿನಲ್ಲಿ ಬಂದ ಕಾನೂನು ಜಾರಿಗೊಳಿಸುವಲ್ಲಿ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿರುವುದು ವಿಪರ್ಯಾಸವಾಗಿದೆ.

ನಗರ ಹೋಬಳಿಯ ಬಹುತೇಕ ಕಂದಾಯ ಭೂಮಿಗಳನ್ನು ಪಿಎಫ್‌ ಎಂದು ನಮೂದಿಸಿ 1980 ರಲ್ಲಿ ಅಧಿಸೂಚನೆ ಹೊರಡಿಸಿದ್ದು, 2019ರಲ್ಲಿ ಮೀಸಲು ಅರಣ್ಯ ಎಂದು ಘೋಷಿಸುವ ತಯಾರಿ ಮಾಡಲಾಗುತ್ತಿದೆ. ಇಲ್ಲಿಯ ಜನರ ಅಹವಾಲು ಕೇಳದೆ, ಸಮಸ್ಯೆ ಇತ್ಯರ್ಥ ಪಡಿಸದೆ ಮೀಸಲು ಅರಣ್ಯ ಎಂದು ಘೋಷಿಸಿದಲ್ಲಿ ಈ ಭಾಗದ ಜನರ ಹಕ್ಕು ಮರೀಚಿಕೆಯಾಗುವುದರಲ್ಲಿ ಸಂದೇಶವಿಲ್ಲ ಎಂದು ನಗರ ಹೋಬಳಿಯ ನಿವಾಸಿಗಳು ಆರೋಪಿಸುತ್ತಾರೆ.

ಕೆಪಿಸಿ ವ್ಯಾಪ್ತಿ ನಿವಾಸಿಗಳ ಹಕ್ಕುಪತ್ರ: ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಂ ಕಟ್ಟುವ ವೇಳೆ ಭೂಸ್ವಾಧಿಧೀನ ಪ್ರಕ್ರಿಯೆಯಲ್ಲಿ ಇಡೀ ಸರ್ವೆ ನಂಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮುಳುಗಡೆಯಾಗದ ಮತ್ತು ಕೆಪಿಸಿಯ ಅನುಪಯುಕ್ತ ಪ್ರದೇಶದಲ್ಲಿ ಸಂತ್ರಸ್ಥರು ಮನೆ ಜಮೀನು ಮಾಡಿಕೊಂಡಿದ್ದಾರೆ. ಆರ್‌ಟಿಸಿಯಲ್ಲಿ ಕೆಪಿಸಿ ಎಂದೇ ನಮೂದಾಗಿದ್ದು, ಈ ಮೀಸಲು ಪ್ರದೇಶಗಳನ್ನು ಕೂಡ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಪ್ರಸ್ತಾವನೆ ತಯಾರಾಗುತ್ತಿದೆ. ಒಂದು ವೇಳೆ ಇಲ್ಲಿಯ ನೈಜ ಸ್ಥಿತಿ ಬಗ್ಗೆ ಅರಿತುಕೊಳ್ಳದೆ ಹಸ್ತಾಂತರಿಸಿದಲ್ಲಿ ಸುಮಾರು 1,864 ಕುಟುಂಬಗಳು ಮತ್ತೆ ಸಂತ್ರಸ್ಥರಾಗುವುದು ಕಟ್ಟಿಟ್ಟ ಬುತ್ತಿ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ವಾರಾಹಿ ಯೋಜನೆಯ ಚಕ್ರಾ ವಾರಾಹಿ ಮುಳುಗಡೆ ಸಂದರ್ಭದಲ್ಲೂ ಮೀಸಲು ಅರಣ್ಯಕ್ಕಾಗಿ 20 ಸಾವಿರ ಎಕರೆ ಪ್ರದೇಶಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಜನರಿಂದ ವಿರೋಧ ವ್ಯಕ್ತವಾಗಿ ಪ್ರಸ್ತಾವನೆ ತಡೆಹಿಡಿಯಲಾಗಿದೆ. ಆದರೆ ಯಾವುದೇ ಸಮಸ್ಯೆ ನೀಗಿಸುವಲ್ಲಿ ಸ್ಥಳೀಯ ಇಲಾಖೆಗಳು ಕಾಳಜಿ ತೋರುತ್ತಿಲ್ಲ ಎಂಬುದು ನಗರ ಹೋಬಳಿ ನಾಗರಿಕರ ವೇದಿಕೆ ಆರೋಪ.

ಕುಮುದ ಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next