ಹೊಸನಗರ: ಸ್ವಾತಂತ್ರ್ಯ ಬಂದು ಏಳು ದಶಕವೇ ಕಳೆದರೂ ಈ ಜನರಿಗೆ ವಾಸದ ಮನೆಯ
ಹಕ್ಕುಪತ್ರ ಪಡೆಯಲು ಸಾಧ್ಯವಾಗದೇ ಅಂದಿನಿಂದಲೂ ಪರದಾಡುತ್ತಲೇ ಬಂದಿದ್ದಾರೆ. ಬದುಕಿಗೆ ಅನಿವಾರ್ಯವಾಗಿ ಬೇಕಾದ ಭೂಮಿಯ ಹಕ್ಕುಪತ್ರವೇ ಸಿಕ್ಕಿಲ್ಲ ಎಂದರೆ ಬದುಕೋದು ಹೇಗೆ ಸ್ವಾಮಿ ಎಂದು ಅಳಲು ತೋಡಿಕೊಳ್ಳುವಂತಾಗಿದೆ ಸಂತ್ರಸ್ತರ ಪಾಡು.
ಇದು ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಅಂತರಾಳದ ಬೇಗುದಿ. ಅಜ್ಜ-ಅಜ್ಜಿಯರ ಕಾಲದಿಂದಲೂ ವಾಸಿಸುತ್ತಿದ್ದೇವೆ. ಅಂದಿನಿಂದ ಇಲ್ಲಿಯವರೆಗೂ ಹಕ್ಕುಪತ್ರಕ್ಕಾಗಿ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಗೋಳು ಕೇಳ್ಳೋರೇ ಇಲ್ಲ ಎಂಬ ಆಕ್ರೋಶ ಕೂಡ ಅವರಲ್ಲಿದೆ.
ಬ್ಯಾಂಕಿನಿಂದ ಸಾಲ ಪಡೆಯಲು ಮಾತ್ರವಲ್ಲ, ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿ ಆಗಬೇಕಾದಲ್ಲಿ ಹಕ್ಕುಪತ್ರ ಕೇಳುತ್ತಾರೆ. ಇಲ್ಲವಾದಲ್ಲಿ ಯಾವುದೇ ಸೌಲಭ್ಯ ಪಡೆಯುವಂತಿಲ್ಲ. ಸ್ವಾತಂತ್ರ್ಯ ಬಂದು 7 ದಶಕದಲ್ಲಿ ಬಂದ ಯಾವುದೇ ಗ್ರಾಪಂಗಳು ಗ್ರಾಮಠಾಣಾ ನಿವಾಸಿಗಳ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿವೆ. ಇನ್ನಾದರೂ ಹಕ್ಕುಪತ್ರ ನೀಡಿ ನೆಮ್ಮದಿಯ ಬದುಕಿಗೆ ಅವಕಾಶ ನೀಡಿ ಎಂದು ಗ್ರಾಮಠಾಣಾ ಭೂಮಿ ನಿವಾಸಿಗಳು ಅಲವತ್ತುಕೊಂಡಿದ್ದಾರೆ.
ಮೂಡುಗೊಪ್ಪ ನಗರ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 92 ಕುಟುಂಬಗಳು ಗ್ರಾಮಠಾಣಾ ವ್ಯಾಪ್ತಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿವೆ. ಆದರೆ ಈವರೆಗೂ ಹಕ್ಕುಪತ್ರ ಸಿಗದೆ ಪರದಾಡುವಂತಾಗಿದೆ. ದುಬಾರತಟ್ಟಿ, ಹಿರೇಮಠ, ಬಂಡಿಮಠ, ಕಾವಡಗೆರೆ ಸೇರಿದಂತೆ ವಿವಿಧ ಭಾಗದಲ್ಲಿ ಗ್ರಾಮಠಾಣಾ ವ್ಯಾಪ್ತಿಗೆ ಸೇರಿದ ಸುಮಾರು 250 ಎಕರೆಗಿಂತಲೂ ಹೆಚ್ಚು ಭೂಮಿ ಇದೆ. ಗ್ರಾಮಠಾಣ ಹಕ್ಕುಪತ್ರ ನೀಡುವಂತೆ ಗ್ರಾಮಸ್ಥರು ಕೂಡ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
ಗ್ರಾಮಸಭೆಯಲ್ಲೂ ಮಾರ್ದನಿ: ಗ್ರಾಮಠಾಣಾ ಹಕ್ಕುಪತ್ರಕ್ಕೆ ನೀಡುವ ಸಂಬಂಧ ಪಟ್ಟಂತೆ ವಿಷಯ ಮೂಡುಗೊಪ್ಪ ಗ್ರಾಪಂನ ಪ್ರತಿ ಗ್ರಾಮಸಭೆಯಲ್ಲಿ ಮಾರ್ದನಿಸುತ್ತಲೇ ಇದೆ. ಆದರೆ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಹಕ್ಕುಪತ್ರ ನೀಡುವ ಸಂಬಂಧ ಅನುಮೋಧನೆ ಪಡೆದಿರುವುದು ಒಂದಷ್ಟು ಭರವಸೆ ಮೂಡಿಸಿದೆ. ಬಡ ರೈತ ಕೂಲಿಕ ಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮಠಾಣಾ ವ್ಯಾಪ್ತಿಯ ಜನರು ತಮ್ಮ ಬದುಕಿಗಾಗಿ ಒಂದಷ್ಟು ಸೌಲಭ್ಯ ಪಡೆಯಲು ಭೂಮಿಯ ಹಕ್ಕುಪತ್ರದ ಅಗತ್ಯವಿದೆ. ಮೂಡುಗೊಪ್ಪ ಗ್ರಾಪಂ ಕೂಡ ನೊಂದ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.