Advertisement

ಭೂಮಿಯಲ್ಲೇ ಹುದುಗಿದೆ 300 ಕ್ವಿಂಟಲ್‌ ಸುವರ್ಣ ಗೆಡ್ಡೆ!

04:57 PM Apr 22, 2020 | Naveen |

ಹೊಸನಗರ: ಆ ರೈತ ಬೆಳೆದಿದ್ದು ಬರೋಬ್ಬರಿ 300 ಕ್ವಿಂಟಲ್‌ ಸುವರ್ಣ ಗೆಡ್ಡೆ. ಉತ್ತಮ ಬೆಳೆ, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಆ ರೈತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಇದು ಮೂಡುಗೊಪ್ಪ ಗ್ರಾಪಂ ದೇವಗಂಗೆಯ ರೈತ ಎಲ್‌. ಗಣಪತಿ ಅವರ ಅತಂತ್ರ ಸ್ಥಿತಿ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಸುವರ್ಣಗೆಡ್ಡೆ ಬೆಳೆದಿದ್ದು ಮಾರುಕಟ್ಟೆ ಇಲ್ಲದೆ ಅದನ್ನು ಭೂಮಿಯಿಂದ ಹೊರ ತೆಗೆಯಲಾಗದ ಅತಂತ್ರ ಸ್ಥಿತಿಗೆ ಬಂದಿದ್ದಾರೆ.

Advertisement

10 ವರ್ಷದಿಂದ ಸುವರ್ಣ ಗೆಡ್ಡೆ ಬೆಳೆ: ರೈತ ಎಲ್‌. ಗಣಪತಿ 10 ವರ್ಷದಿಂದ ಸುವರ್ಣ ಗೆಡ್ಡೆ ಬೆಳೆಯುತ್ತಾ ಬಂದಿದ್ದಾರೆ. ಈ ಬಾರಿಯ ಬೆಳೆಗೆ ವಿಶೇಷ ಗಮನ ನೀಡಿದ್ದು, ಉತ್ತಮ ಪಸಲಿನ ನಿರೀಕ್ಷೆ ಹುಸಿಯಾಗಿಲ್ಲ. ಆದರೆ ಇದ್ದಕ್ಕಿದ್ದಂತೆ ಬಂದೆರಗಿದ ಕೊರೊನಾಘಾತದಿಂದ ಫಸಲು ಕೈ ಸೇರುವ ನಿರೀಕ್ಷೆ ಮಾತ್ರ ಹುಸಿಯಾಗುತ್ತಿದೆ.

ಮಾರುಕಟ್ಟೆ ಇಲ್ಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುವರ್ಣ ಗೆಡ್ಡೆಗೆ ಬಹು ಬೇಡಿಕೆ ಇದೆ. ಮದುವೆ ಇನ್ನಿತರ ಸಮಾರಂಭಗಳಿಗೆ ಸುವರ್ಣ ಗೆಡ್ಡೆ ವಿಲೇವಾರಿಯಾಗುತ್ತಿತ್ತು. ಆದರೆ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಂಪರ್ಕ ವ್ಯವಸ್ಥೆಯೂ ಇಲ್ಲ. ಕಾರ್ಯಕ್ರಮಗಳು ನಡೆಯುತ್ತಿಲ್ಲ. ಪ್ರತಿವರ್ಷ ಉಡುಪಿ ಜಿಲ್ಲೆಗೆ ಸಾಗಿಸುತ್ತಿದ್ದ ಸುವರ್ಣಗೆಡ್ಡೆಯನ್ನು ಕೇಳುವವರು ಇಲ್ಲದಂತಾಗಿದೆ.

ಹಾಕಿದ ದುಡ್ಡು ವಾಪಸಿಲ್ಲ: ಸುವರ್ಣ ಗೆಡ್ಡೆ ಭೂಮಿಯಲ್ಲಿರುವಷ್ಟು ದಿನ ಸೇಫ್‌. ಆದರೆ ಮಳೆ ಆರಂಭಕ್ಕಿಂತ ಮುನ್ನ ಭೂಮಿಯಿಂದ ಹೊರತೆಗೆಯಲೇ ಬೇಕು. ತೆಗೆದ ಮೇಲೆ ಕೂಡಲೇ ಮಾರುಕಟ್ಟೆ ತಲುಪದಿದ್ದರೆ ಗಡ್ಡೆಯ ತೂಕ ಕಡಿಮೆಯಾಗುತ್ತ ಬರುತ್ತದೆ. ಈಗಾಗಲೇ ಬೆಳೆಗೆ 2 ಲಕ್ಷದ ವರೆಗೆ ವೆಚ್ಚ ಮಾಡಲಾಗಿದ್ದು, ಹಾಕಿದ ಹಣ ವಾಪಸ್‌ ಬರುವ ಸಾಧ್ಯತೆ ಕೂಡ ಇಲ್ಲದಂತಾಗಿದೆ.

ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕೀತೆ?: ಈಗಾಗಲೇ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತದೆ ಎಂಬ ಭರವಸೆಯನ್ನು ಎಪಿಎಂಸಿ
ನೀಡುತ್ತಲೇ ಬಂದಿದೆ. ಆದರೆ ಅಲ್ಲಿ ಖರೀದಿ ಮಾಡುವವರ್ಯಾರು? ಎಂಬ ಆತಂಕಕ್ಕೆ ರೈತರು ಗುರಿಯಾಗಿದ್ದಾರೆ.

Advertisement

ಪ್ರತಿವರ್ಷ ಸುವರ್ಣ ಗಡ್ಡೆಗಾಗಿ ಬೇಡಿಕೆ ಇಡುವ ಉಡುಪಿ ಜಿಲ್ಲೆಗೆ ಹಂತಹಂತವಾಗಿ ಕಳುಹಿಸಿ ಕೊಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲವೂ ಸ್ಥಗಿತಗೊಂಡಿದ್ದು ಕೇಳುವವರು ಇಲ್ಲವಾಗಿದೆ. ಅನುಮತಿ ಕೊಟ್ಟರೆ ಮಾರುಕಟ್ಟೆಗೆ ಸಾಗಿಸಬಹುದು. ಆದರೆ ಸರಾಸರಿ ಬೆಲೆ ಸಿಗದ್ದಿದ್ದರೆ ತೆಗೆದುಕೊಂಡು ಹೋದ ವಾಹನ ಬಾಡಿಗೆಯೂ ಹುಟ್ಟುವುದಿಲ್ಲ. ಎಪಿಎಂಸಿ ಉತ್ತಮ ಬೆಲೆ ನೀಡದಿದ್ದರೂ ಪರವಾಗಿಲ್ಲ. ಆದರೆ ಹಾಕಿದ ಹಣವಾದರೂ ವಾಪಸ್‌ ಸಿಗುವಂತ ಯೋಗ್ಯ ಬೆಲೆಯನ್ನು ನೀಡಬೇಕು.
ಎಲ್‌. ಗಣಪತಿ,
ದೇವಗಂಗೆ, ಸುವರ್ಣಗೆಡ್ಡೆ ಬೆಳೆಗಾವಿ

ಸುವರ್ಣ ಗಡ್ಡೆ ಬೆಳೆದ ರೈತ ಆತಂಕ ಪಡುವ ಅಗತ್ಯವಿಲ್ಲ. ಗಡ್ಡೆಯನ್ನು ಒಂದೇ ಸಲ ಕಟಾವು ಮಾಡುವ ಅಗತ್ಯವಿಲ್ಲ. ಹಂತಹಂತವಾಗಿ ಮಾಡಬಹುದು. ಅಲ್ಲದೆ
ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ಸುವರ್ಣ ಗಡ್ಡೆಗೆ ಉತ್ತಮ ಬೇಡಿಕೆ ಇದೆ. ರೈತರ ಜೊತೆ ಸಂಪರ್ಕದಲ್ಲಿರುತ್ತೇವೆ.
ಯೋಗೀಶ್‌, ಡೆಪ್ಯುಟಿ ಡೈರೆಕ್ಟರ್‌,
ತೋಟಗಾರಿಕ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next