ಹೊಸನಗರ: ಹಿಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆಯದ, ದಾಖಲು ಮಾಡದ ವಿಚಾರವನ್ನೇ ಹಿಂದಿನ ಸಭೆಯ ನಿರ್ಣಯ ಎಂದು ದಾಖಲು ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಅಹೋರಾತ್ರಿ ಧರಣಿ ಕುಳಿತ ಘಟನೆ ಮೂಡುಗೊಪ್ಪ ಗ್ರಾಪಂನಲ್ಲಿ ನಡೆದಿದೆ.
ತಾಲೂಕಿನ ಮೂಡುಗೊಪ್ಪ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸ.ನಂ. 35ರಲ್ಲಿನಿರ್ಮಿಸಲು ಪಂಚಾಯತ್‌ನಿಂದ ಎನ್ ಒಸಿ ನೀಡಲು ಮುಂದಾಗಿರುವುದೇ ಈ ಪ್ರತಿಭಟನೆಗೆ ಕಾರಣವಾಗಿದೆ. ಕ್ರಮ ಕೈಗೊಳ್ಳಿ: ಈಗಾಗಲೇ ಬಂಡಿಮಠದಲ್ಲಿ ಸಮುದಾಯ ಭವನ ನಿರ್ಮಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದನ್ನು ಏಕಾಏಕಿ ಬದಲಿಸಿ ಸ.ನಂ. 35ರಲ್ಲಿ ನಿರ್ಮಿಸಲು ಎನ್‌ಒಸಿ ನೀಡಲು ಪಂಚಾಯತ್ ಮುಂದಾಗಿದೆ. ಆದರೆ ಈ ಸಂಬಂಧ ಹಿಂದಿನ ಸಭೆಯಲ್ಲಿ ವಿಚಾರ ಪ್ರಸ್ತಾಪಕ್ಕೆ ಬಂದಿರಲಿಲ್ಲ. ಆದರೂ ಹಿಂದಿನ ಸಭೆಯ ನಿರ್ಣಯದಂತೆ ಎಂದು ಓದಿ ಪಾಸ್ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಎನ್‌ಒಸಿಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಪಟ್ಟು ಹಿಡಿದಿದ್ದಾರೆ.
ಸ.ನಂ. 35ಕ್ಕು ಗ್ರಾಮಠಾಣಾಕ್ಕು ಸಂಬಂಧವಿಲ್ಲ: ಸಮುದಾಯ ಭವನಕ್ಕೆ ನಿರ್ಮಾಣ ಸಂಬಂಧಪಟ್ಟಂತೆ ಜಾಗ ಗುರುತಿಸಲು ಒತ್ತಡವಿತ್ತು. ಇಲ್ಲವಾದಲ್ಲಿ ಹಣ ವಾಪಸ್ ಹೋಗುತ್ತಿತ್ತು. ಸರ್ಕಾರಿ ಕೆಲಸವಾದ ಕಾರಣ ತುರ್ತು ನಿರ್ಣಯ ಕೈಗೊಂಡು ಬೈಸೆ ಗ್ರಾಮದ ಸ.ನಂ. 35ರಲ್ಲಿ ಡಿಮ್ಯಾಂಡ್ ನೀಡಲು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲು ಕೂಡ ತೀರ್ಮಾನಿಸಲಾಗಿತ್ತು. ಆದರೆ ಉಪಾಧ್ಯಕ್ಷರಿಗೆ ಸೇರಿದ ಗ್ರಾಮಠಾಣಾ ಜಾಗಕ್ಕೂ ಸ.ನಂ. 35ಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಅವರು ಧರಣಿ ಮಾಡಿದ ಉದ್ದೇಶ ಅರ್ಥವಾಗುತ್ತಿಲ್ಲ. ಎನ್ ಒಸಿ ನೀಡಿರುವುದರ ಹಿಂದೆ ದುರುದ್ದೇಶವಿಲ್ಲ ಎಂದು ಪಂಚಾಯತ್ ಅಧ್ಯಕ್ಷೆ ಲತಾ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳು ಗಮನಹರಿಸಲಿ: ಕಿಮ್ಮನೆ ಮೂಡುಗೊಪ್ಪ ಗ್ರಾಪಂ ನಡಾವಳಿಗೆ ಸಂಬಂಧಪಟ್ಟಂತೆ ಚರ್ಚೆನಡೆಯದಿದ್ದರೂ ಜಾಗಕ್ಕೆ ಸಂಬಂಧಪಟ್ಟಂತೆ ನಿರ್ಣಯವೊಂದನ್ನು ದಾಖಲು ಮಾಡಿರುವುದನ್ನು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಖಂಡಿಸಿದ್ದಾರೆ. ತಪ್ಪು ನಿರ್ಣಯದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾವು ಕೂಡ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇಒ ನೇತೃತ್ವದಲ್ಲಿ ಸಭೆ: ಬಳಿಕ ತಾಪಂ ಕಾರ್ಯ ನಿರ್ವಹಣಾಧಿಕಾರಿ, ಪ್ರವೀಣಕುಮಾರ್ ನೇತೃತ್ವದಲ್ಲಿ ಸಭೆ ನಡೆದು ಕೈಗೊಂಡಿರುವ ನಿರ್ಣಯದ ಲೋಪದೋಷಗಳ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಗ್ರಾಪಂ ಸದಸ್ಯರ ನಡುವೆ ಪರ- ವಿರೋಧ ಮಾತುಗಳು ಕೇಳಿ ಬಂದವು. ಯಾವುದೇ ನಿರ್ಣಯ ದಾಖಲಾದ ನಂತರ ಮುಂದಿನ ಸಭೆಯಲ್ಲಿ ಅನುಮೋದನೆ ಪಡೆದುಕೊಂಡ ನಂತರವೇ ಸಿಂಧುಗೊಳ್ಳುತ್ತದೆ. ಇಲ್ಲವಾದಲ್ಲಿ ಆ ನಿರ್ಣಯಗಳಿಗೆ ಅವಕಾಶವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು. ಗ್ರಾಪಂ ಸದಸ್ಯರಾದ ಎಚ್.ವೈ. ಸತೀಶ್, ಎ ಎನ್. ಆದಿರಾಜ್ ಶಾರದಮ್ಮ, ಹಿಲ್ಕುಂಜಿ ಕುಮಾರ್, ಕೆ.ಬಿ. ಕುಮಾರ್, ಬಿ.ವೈ. ರವೀಂದ್ರ ಪಿಡಿಒ ವಿಶ್ವನಾಥ್ ಇದ್ದರು.