Advertisement

ಮಲೆನಾಡಲ್ಲೊಂದು ಮಾದರಿ ಶಾಲೆ

03:01 PM Jan 31, 2020 | Naveen |

ಹೊಸನಗರ: ಸರ್ಕಾರಿ ಶಾಲೆಯೆಂದರೆ ಅಸಡ್ಡೆ ಹುಟ್ಟಿಸುವ ಸ್ಥಿತಿ ನಮ್ಮ ಮುಂದಿದೆ. ಅದರಲ್ಲೂ ಹಳ್ಳಿಗಾಡಿನ ಸರ್ಕಾರಿ ಶಾಲೆ ಎಂದರೆ ಮುಗಿಯಿತು. ಕಣ್ಣೆತ್ತಿ ನೋಡುವ ಸ್ಥಿತಿ ಬಂದಿದೆ. ಆದರೆ ಇಲ್ಲೊಂದು ಕುಗ್ರಾಮದ ಸರ್ಕಾರಿ ಶಾಲೆಯೊಂದು ಮಲೆನಾಡಿನ ಮಾದರಿ ಶಾಲೆಯಾಗಿ ಗಮನ ಸೆಳೆಯುತ್ತಿದೆ.

Advertisement

ಹೌದು, ಹೊಸನಗರ ತಾಲೂಕಿನ ಬಾವಿಕೈ ಶಾಲೆಯ ಆವರಣದೊಳಗೆ ಹೊಕ್ಕರೆ ಸಾಕು. ಸರ್ಕಾರಿ ಶಾಲೆಯ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ. ಮಾತ್ರವಲ್ಲ, ಸರ್ಕಾರಿ ಶಾಲೆಯೊಂದು ಹೀಗೂ ಇರಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. ಹಸಿರು ಶಾಲೆಯಾಗಿ ಗುರುತಿಸಿಕೊಂಡ ಬಾವಿಕೈ ಶಾಲೆ ಮಲೆನಾಡಿನ ಮಾದರಿ ಶಾಲೆಯಾಗಿ ರೂಪುಗೊಂಡಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಶಿಕ್ಷಕರ ಕ್ರಿಯಾಶೀಲತೆ; ಪೋಷಕರ ಒಲವು: ಶಿಕ್ಷಕರ ಕ್ರಿಯಾಶೀಲತೆಯ ಜೊತೆಗೆ ಪೋಷಕರು ಸರ್ಕಾರಿ ಶಾಲೆಗೆ ಒಲವು ತೋರಿಸಿದರೆ ಸರ್ಕಾರಿ ಶಾಲೆ ಎಷ್ಟೊಂದು ಪರಿಣಾಮಕಾರಿಯಾಗಿ ಬದಲಾಗಬಹುದು ಎಂಬುದಕ್ಕೆ ಹಸಿರು ಶಾಲೆಯಾಗಿ ಪ್ರಶಸ್ತಿ ಸ್ವೀಕರಿಸಿ ರಾಜ್ಯದ ಶಿಕ್ಷಣ ಸಚಿವರ ಗಮನ ಸೆಳೆದ ಬಾವಿಕೈ ಶಾಲೆ ಒಂದು ಉತ್ತಮ ನಿದರ್ಶನ.

ಔಷಧೀಯ ವನದ ಜೊತೆ ಗಮನ ಸೆಳೆದ ಬಾಳೆತೋಟ: ಇಲ್ಲಿ ಔಷ ಧೀಯವನದ ಜೊತೆಗೆ ಬಾಳೆತೋಟವೂ ಗಮನ ಸೆಳೆಯುತ್ತದೆ. ಶಾಲೆಯ ಮುಂದೆ ವಿಧ- ವಿಧ ಜಾತಿಯ ಹೂವಿನ ಗಿಡಗಳ ತೋಟ ನೋಡಿದಾಗ ಇದೊಂದು ಉದ್ಯಾನವನ ಎನಿಸದೆ ಇರದು. ಶಾಲಾ ಪಕ್ಕದಲ್ಲಿ ಸುತ್ತಮುತ್ತ ಕಣ್ಣು ಹಾಯಿಸಿದರೆ ವಿವಿಧ ಔಷಧ ಮೂಲಿಕೆಗಳ ಸಸ್ಯರಾಶಿ. ಇದೊಂದು ಆಯುರ್ವೇದ ಔಷಧವನ ಎನಿಸಲೇಬೇಕು. ಇನ್ನೂ ಒಳ ಹೊರಗಿನ ಸುತ್ತಲೂ ಸ್ವಚ್ಛವಾಗಿದೆ.

ಒಳ ಪ್ರವೇಶಿಸದರೆ ಬಾಳೆ ಮತ್ತು ಅಡಕೆ ತೋಟ ನಿರ್ಮಾಣವಾಗುತ್ತಿರುವುದು ಕಂಡು ಬರುತ್ತಿದೆ. ಇನ್ನು ಜನ ಬಿಸುಟ ವಸ್ತುಗಳಿಂದಲೇ ಅನೇಕ ಆವಿಷ್ಕಾರ ಮಾಡಲಾಗಿದೆ. ಡಿಶ್‌ ಬುಟ್ಟಿಯ ಮೂಲಕ ಬಿಸಿ ನೀರು, ಸೈಕಲ್‌ ತುಳಿದರೆ ಹನಿ ನೀರು ಬರುವಂತೆ ಮಾಡಿರುವುದು ವಿಶೇಷ.

Advertisement

ಕಾಂಪೌಂಡ್‌ ಸುತ್ತ ನಮ್ಮ ಸಂಸ್ಕೃತಿಯ ಹಸೆ ಚಿತ್ತಾರ ಮೂಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅದರ ಮಹತ್ವ ತಿಳಿಸುವ ಕಾರ್ಯ ಕೂಡ ಆಗಿದೆ. ತ್ಯಾಜ್ಯ ಬಾಟಲಿಯೂ ಸೇರಿದಂತೆ ಡಬ್ಬಿ ಇತ್ಯಾದಿಗಳಿಂದಲೇ ಸುಂದರವಾಗಿ ಚಿತ್ರ ಬರೆದು ನಮ್ಮ ರಾಜ್ಯದಲ್ಲಿರುವ ಜಿಲ್ಲೆಯ ಹೆಸರು, ತಾಲೂಕು ಮತ್ತಿತರ ಮಾಹಿತಿಗಳ ಪಟ್ಟಿ ಶಾಲಾ ವನದೊಳಗೆ ಇರುವುದರಿಂದ ಮಕ್ಕಳು ಹೋಗಿ ಬರುತ್ತ ಅದನ್ನು ನೋಡಿ ಮನನ ಮಾಡಿಕೊಳ್ಳುವಷ್ಟು ಕಲಿಕೆಗೆ ಅತ್ಯಂತ ಸುಲಭ ಮತ್ತು ಸರಳ ವಿಧಾನ ಅಳವಡಿಸಿರುವುದು ಮೆಚ್ಚಲೇಬೇಕು.

ಶಿಕ್ಷಕರ ಶ್ರಮ ಗಮನಾರ್ಹ: ಇಲ್ಲಿರುವ ಎರಡು ಜನ ಶಿಕ್ಷಕರು ನಿತ್ಯ ಶಾಲೆ ಆರಂಭಕ್ಕೂ ಮುನ್ನ ಒಂದು ಗಂಟೆ, ಸಂಜೆ ಶಾಲೆ ಬಿಟ್ಟ ನಂತರ ಕೆಲ ಸಮಯ ಶ್ರಮ ವಹಿಸಿರುವ ಪರಿಣಾಮ ಕಳೆದ ನಾಲ್ಕಾರು ವರ್ಷಗಳಿಂದ ಶಾಲೆ ಸುಂದರ ನಂದನ ವನವಾಗಿದೆ. ಶಾಲಾ ಸಮಿತಿಯವರು ಬಡವರಾದರೂ ಸ್ಪಂದಿಸುತ್ತಿರುವುದೂ ಕೂಡ ಇಂತಹ ಸಾಧನೆಗೆ ಪ್ರೇರಣೆ ನೀಡಿದೆ. 1 ರಿಂದ 5 ನೇ ತರಗತಿಯವರೆಗೆ ಕೇವಲ 16 ಮಕ್ಕಳಿರುವ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ಮಕ್ಕಳು ಸಭಾ ನಿರೂಪಣೆಯಿಂದ ಹಿಡಿದು ಎಲ್ಲ ವಿಷಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಉತ್ತಮ ಕಲಿಕೆ ಇಲ್ಲಿದೆ ಎನ್ನುವುದನ್ನು ತೋರಿಸುತ್ತಿದೆ. ಅನೇಕ ಸ್ಪರ್ಧೆಗಳಲ್ಲಿಯೂ ಮಕ್ಕಳು ಛಾಪು ಮೂಡಿಸಿದ್ದಾರೆ. ಪರಸ್ಪರ ಊರಿನವರು ಮತ್ತು ಶಿಕ್ಷಕರ ಆತ್ಮೀಯ ಬಾಂಧವ್ಯ ಶಾಲೆಗೆ ಒಳ್ಳೆಯ ರೂಪು ನೀಡಿದೆ.

ಒಟ್ಟಾರೆ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಇಂದಿನ ದಿನದಲ್ಲಿ ಬಾವಿಕೈ ಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸರವನ್ನೊಮ್ಮೆ ಆಸ್ವಾದಿಸಬೇಕು. ಅಲ್ಲದೆ ಅಲ್ಲಿಯ ಶಿಕ್ಷಣ ಪದ್ಧತಿ, ಪರಿಸರ ಮಹತ್ವ, ಗ್ರಾಮೀಣ ಸೊಗಡಿನ ಹಸೆ ಚಿತ್ತಾರ ಹೀಗೆ ಹತ್ತಾರು ಅಂಶಗಳತ್ತ ಗಮನ ಹರಿಸಬೇಕು. ರಾಜ್ಯದ ಸರ್ಕಾರಿ ಶಾಲೆಗಳು ಬಾವಿಕೈ ಶಾಲೆ ರೀತಿಯಲ್ಲಿ ರೂಪುಗೊಂಡರೆ ಸರ್ಕಾರಿ ಶಾಲೆಗಳನ್ನು ನೋಡುವ ರೀತಿಯೇ ಬದಲಾಗುತ್ತದೆ ಅಲ್ಲವೇ?

ಶಾಲೆಗೆ ಬಂದ ದಿನದಿಂದಲೂ ಈ ಶಾಲೆಯನ್ನು ಸುಂದರವಾಗಿ
ನಿರ್ಮಿಸುವ ಕನಸಿತ್ತು. ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸಿರುವುದಲ್ಲದೆ ಸಹ ಶಿಕ್ಷಕರು ಹೆಗಲಿಗೆ ಹೆಗಲು ಕೊಟ್ಟರು. ಗ್ರಾಮದ ಜನರ ಸ್ಪಂದನೆ ಕೂಡ ಉತ್ತಮವಾಗಿದೆ. ಹಾಗಾಗಿ ಹಸಿರು ಶಾಲೆಯಾಗಿದೆ.
ರಾಮು, ಮುಖ್ಯ ಶಿಕ್ಷಕ,
ಬಾವಿಕೈ ಶಾಲೆ.

ಉತ್ತಮ ಶಾಲೆಯಲ್ಲೊಂದು ಅತ್ಯುತ್ತಮ ಶಾಲೆ. ಇದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ಕಿರಿಯ ಪ್ರಾಥಮಿಕ ಶಾಲೆ ಹೀಗೆ ಸಾಧನೆ ಮಾಡುವುದು ಅಪರೂಪ. ಆದರೆ ಬಾವಿಕೈ ಶಾಲೆ ಸಾಧನೆ ಮಾಡಿದೆ. ತಾಲೂಕಿನಲ್ಲಿ ಈಗಾಗಲೇ ನೀರೇರಿ, ಸಮಟಗಾರು, ಸಮಗೋಡು ಹೀಗೆ ಅನೇಕ ಶಾಲೆಗಳು ರಾಜ್ಯಕ್ಕೆ ಮಾದರಿಯಾಗು ರೂಪುಗೊಳ್ಳುತ್ತಿರುವುದು ಇಲಾಖೆಗೆ ಹೆಮ್ಮೆಯ ವಿಷಯ.
ರಾಮಪ್ಪ ಗೌಡ,
ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸನಗರ

ಮುಖ್ಯ ಶಿಕಕ್ಷರು ಶಾಲೆ ಸುಂದರವಾಗಿಸಲು ಪಣ ತೊಟ್ಟು ಕೆಲಸ ಮಾಡುತ್ತಿರುವಾಗ ಅದಕ್ಕೆ ಬೇಕಾದ ಸಹಕಾರ ನೀಡುತ್ತಿದ್ದೇನೆ. ನಿಜಕ್ಕೂ ಒಳ್ಳೆಯ ವಿದ್ಯಾರ್ಥಿ ಮತ್ತು ಪೋಷಕರು ಇಲ್ಲಿದ್ದಾರೆ. ಹಾಗಾಗಿ ಇದೆಲ್ಲ ಸಾ ಧಿಸಲು ಸಾಧ್ಯವಾಗಿದೆ.
ನಾಗರಾಜ್‌, ಸಹ ಶಿಕ್ಷಕ

ಶಿಕ್ಷಕರ ಕ್ರಿಯಾಶೀಲತೆಗೆ ಮೆಚ್ಚುಗೆ ಆಗಿದೆ. ಹಾಗಾಗಿ ಅವರಿಗೆ ವಿಶೇಷ ಸಹಕಾರ ನೀಡುತ್ತಿದ್ದೇವೆ. ಹಾಗಾಗಿ ಮಲೆನಾಡ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ.
ಕೃಷ್ಣಮೂರ್ತಿ,
ಶಾಲಾ ಸಮಿತಿ ಅಧ್ಯಕ್ಷ್ಯ

„ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next