Advertisement

ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಬಿವೈಆರ್‌

01:34 PM Aug 16, 2019 | Naveen |

ಹೊಸನಗರ: ಸುರಿದ ಮಹಾಮಳೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಹಾನಿಯಾಗಿದೆ. ಮಳೆಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರವನ್ನು ಶೀಘ್ರವಾಗಿ ತಲುಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ತಾಲೂಕಿನ ಮೂಡುಗೊಪ್ಪ, ಅರಮನೆಕೊಪ್ಪ, ಸಂಪೇಕಟ್ಟೆ ಮತ್ತು ನಿಟ್ಟೂರು ಗ್ರಾಪಂನಲ್ಲಿ ಸಂತ್ರಸ್ತರ ಸಭೆ ನಡೆಸಿದ ಬಳಿಕ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ 7 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಹಾನಿಯ ತೀವ್ರತೆಯನ್ನು ಗಮನಿಸಿದ್ದಾರೆ. ಅಲ್ಲದೆ ನಿಯಮ ಮೀರಿ ಹೆಚ್ಚು ಅನುದಾನ ಘೋಷಣೆ ಮಾಡಿದ್ದಾರೆ ಎಂದರು.

ಮಲೆನಾಡು ಭಾಗಕ್ಕೆ ವಿಶೇಷ ಒತ್ತು: ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬೇರೆಯದ್ದೇ ಆದ ಸಮಸ್ಯೆ ಇದೆ. ಅದರಲ್ಲೂ ಮಲೆನಾಡು ತಾಲೂಕುಗಳಾದ ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಸಮಸ್ಯೆ ತೀವ್ರತೆ ಹೆಚ್ಚಿದ್ದು ವಿಶೇಷ ಒತ್ತು ನೀಡಲಾಗುವುದು ಎಂದರು.

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಪ್ರಯತ್ನ: ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಬಿಟ್ಟು ಹೋಗಿರುವುದು ಬಹುದೊಡ್ಡ ಅನ್ಯಾಯ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದ ಶಾಸಕ ಹರತಾಳು ಹಾಲಪ್ಪ ಮಾತಿಗೆ ಧ್ವನಿಗೂಡಿಸಿದ ಸಂಸದ ಬಿ.ವೈ.ರಾಘವೇಂದ್ರ, ಹೊಸನಗರ ತಾಲೂಕು ವಿಸ್ತೀರ್ಣದಲ್ಲಿ ಬಹು ದೊಡ್ಡದಾಗಿದ್ದರೂ ಕೂಡ ಜನಸಂಖ್ಯೆ ಕಡಿಮೆ ಇರುವ ಕಾರಣ ಕ್ಷೇತ್ರ ಕೈಬಿಡಲಾಗಿತ್ತು. ನಗರ ಪ್ರದೇಶದಲ್ಲಿ ಅತೀಹೆಚ್ಚು ಶಾಸಕರು ಇದ್ದಾರೆ. ಮುಂದಿನ ದಿನದಲ್ಲಿ ಮಲೆನಾಡು ಭಾಗವನ್ನು ವಿಶೇಷವಾಗಿ ಪರಿಗಣಿಸಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಅಸ್ತಿತ್ವಕ್ಕೆ ತರುವ ಪ್ರಯತ್ನ ಮಾಡುವ ಭರವಸೆ ನೀಡಿದರು.

ಮಡೋಡಿ ಸೇತುವೆ ವೀಕ್ಷಣೆ: ಮಳೆಯಿಂದ ಕೊಚ್ಚಿ ಹೋಗಿರುವ ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಮಡೋಡಿ ಸೇತುವೆ ದಂಡೆಯನ್ನು ಸಂಸದರು ವೀಕ್ಷಿಸಿದರು. ಅಲ್ಲದೆ ತುರ್ತು ಕಾಮಗಾರಿ ಕೈಗೊಂಡು ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ನಿಂತ ನಂತರ ನೂತನ ಸೇತುವೆ ನಿರ್ಮಾಣ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ್‌, ಜಿಪಂ ಸದಸ್ಯ ಬಿಎಸ್‌ಆರ್‌ ಸುರೇಶ್‌, ತಾಪಂ ಸದಸ್ಯ ಕೆ.ವಿ. ಸುಬ್ರಹ್ಮಣ್ಯ, ಎಪಿಎಂಸಿ ಸದಸ್ಯ ರಮಾಕಾಂತ್‌, ಪ್ರಮುಖರಾದ ಕೆ.ವಿ. ಕೃಷ್ಣಮೂರ್ತಿ, ಕೆರೆಕೈ ಪ್ರಸನ್ನ, ಎನ್‌.ಆರ್‌. ದೇವಾನಂದ್‌, ತೀರ್ಥೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next