Advertisement

ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ನೀಡಲು ಕ್ರಮ

12:23 PM Jun 26, 2019 | Team Udayavani |

ಹೊಸನಗರ: ಶರಾವತಿ ನದಿ ಮುಳುಗಡೆ ಸಂತ್ರಸ್ಥ ಫಲಾನುಭವಿಗಳ ಪಟ್ಟಿ ಮಾಡಲು ಎಲ್ಲಾ ತಾಲೂಕು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದ್ದು ಸಂತ್ರಸ್ಥರ ಭೂ ಹಕ್ಕು ಕುರಿತ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಭೂ ಮಂಜೂರಾತಿ ಅದಷ್ಟೂ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.

Advertisement

ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಎಲ್ಲಾ ತಾಲೂಕು ತಹಶೀಲ್ದಾರ್‌ಗಳ ಮಾಹಿತಿ ಸಂಗ್ರಹಿಸಿ ಅವರು ಮಾತನಾಡಿದರು.

ಈ ಹಿಂದೆ ಇಲ್ಲಿನ ಶರಾವತಿ ನದಿ ಜಲಾಶಯ ನಿರ್ಮಾಣ ಸಂಬಂಧ ಸಾವಿರಾರು ರೈತ ಕುಟುಂಬಗಳು ಬದುಕು ಕಳೆದುಕೊಂಡು ಸಂತ್ರಸ್ಥರಾದರು. ಅವರಿಗೆ ಸರ್ಕಾರ ಘೋಷಿಸಿದ ಪರಿಹಾರ ಭೂಮಿ ನೀಡುವಲ್ಲಿ ಸೂಕ್ತ ಕ್ರಮ ಜರುಗಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ನೆಲೆಗೊಂಡಿರುವ ಸಂತ್ರಸ್ಥರಿಗೆ ಸೂಕ್ತ ಭೂ ಪರಿವರ್ತನೆ ಅಡಿಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ಇದ್ದ ಎಲ್ಲಾ ತೊಡಕುಗಳನ್ನು ನಿವಾರಣೆ ಮಾಡುವಲ್ಲಿ ಗಮನ ಹರಿಸಲಾಗಿದೆ. ಈ ಸಂಬಂಧ ಎಲ್ಲಾ ತಾಲೂಕು ತಹಶೀಲ್ದಾರ್‌ಗಳಿಗೂ ವರದಿ ಕೇಳಿ ಪತ್ರ ವ್ಯವಹಾರ ನಡೆಸಲಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕಿದೆ. ಸಂತ್ರಸ್ಥರ ಭೂಮಿ ಮಂಜೂರಾತಿಯಲ್ಲಿ ಸಮಸ್ಯೆಗಳು ಇದ್ದಲ್ಲಿ ತಮ್ಮ ಗಮನಕ್ಕೆ ತರಬಹುದಾಗಿದೆ. ತಾವು ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ರುದ್ರಭೂಮಿಯಲ್ಲಿ ತಗಾದೆ ಬೇಡ: ಗ್ರಾಮದಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ರುದ್ರಭೂಮಿ ಜಾಗದ ವಿಚಾರದಲ್ಲಿ ಇಲಾಖೆ, ಇಲಾಖೆಗಳ ನಡುವೆ ತಗಾದೆ ಬೇಡ. ಸುಸೂತ್ರವಾಗಿ ಕಾರ್ಯ ಜರುಗಿಸಬೇಕಾಗಿದೆ. ಕೆಲವೆಡೆ ಅರಣ್ಯ ಇಲಾಖೆಯ ತಕರಾರುಗಳು ಇವೆ. ಇದನ್ನು ನಿವಾರಿಸಬೇಕಿದೆ. ಇಲ್ಲಿ ಅರಣ್ಯ ಇಲಾಖೆ ಸಲ್ಲದ ವಿಷಯದಲ್ಲಿ ಕಾಲಹರಣ ಮಾಡಬಾರದು. ತಕರಾರು ಇಲ್ಲವಾಗಿದ್ದಲ್ಲಿ ಕೂಡಲೇ ಸಹಕರಿಸಬೇಕಿದೆ. ಅಲ್ಲದೆ ಒಮ್ಮೆ ತಕರಾರು ಇದ್ದಲ್ಲಿ ಸೂಕ್ತ ಹಿಂಬರಹ ನೀಡಬೇಕಾಗಿದೆ. ಸುಮ್ಮನೆ ಸತಾಯಿಸಬೇಡಿ ಎಂದು ತಾಕೀತು ಮಾಡಿದರು.

ಜಂಟಿ ಸರ್ವೆ: ಜಿಲ್ಲೆಯಲ್ಲಿ ನಡೆಯಬೇಕಾಗಿದ್ದ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ಕಾರ್ಯಾಚರಣೆ ಅದಷ್ಟು ಬೇಗ ಮುಕ್ತಾಯವಾಗಬೇಕಿದೆ. ತಾಲೂಕು ವ್ಯಾಪ್ತಿಯಲ್ಲಿ ತಂಡಗಳ ರಚಿಸಲಾಗಿದ್ದು 15 ದಿನಗಳ ಕಾಲ ಸರ್ವೆ ನಡೆಸಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು. ಇನ್ನು ಮೂರು ತಿಂಗಳೊಳಗೆ ಸರ್ವೈ ಪೂರೈಸಿ ವರದಿ ನೀಡುವಂತೆ ಸೂಚಿಸಿದರು.

Advertisement

ಹಲವಷ್ಟು ತಾಲೂಕುಗಳಲ್ಲಿ ಅರಣ್ಯ ಸಮಿತಿ ಚಾಲ್ತಿಯಲ್ಲಿಲ್ಲದ ಕಾರಣ ಅರಣ್ಯ ಹಕ್ಕೂ ಯೋಜನೆ ನೆನೆಗುದಿಗೆ ಬಿದ್ದಿದೆ. ಇದರಲ್ಲಿ ಬಂದ 20 ಸಾವಿರ ಅರ್ಜಿ ತಿರಸ್ಕೃತವಾಗುವಲ್ಲಿ ಅರಣ್ಯ ಹಕ್ಕು ಸಮಿತಿ ನಿರ್ಲಕ್ಷ್ಯವೂ ಕಾರಣವಾಗಿದೆ. ಸಮಿತಿ ನಿಷ್ಕ್ರಿಯವಾದ ಪರಿಣಾಮ ಅರಣ್ಯ ಹಕ್ಕು ಮಂದಗತಿಯಲ್ಲಿ ಸಾಗುತ್ತಿದೆ. ಎಲ್ಲಿ ಅರಣ್ಯ ಸಮಿತಿ ಜಾಗೃತವಾಗಿಲ್ಲವೋ ಅಲ್ಲಿ ಬದಲಿ ಸಮಿತಿ ರಚಿಸಬೇಕಾಗಿದೆ. ಉದಾಹರಣೆಗ ಹೊಸನಗರ ತಾಲೂಕಿನ 23 ಗ್ರಾಪಂಗಳಲ್ಲಿ ಸಮಿತಿಗಳು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಈ ಕೂಡಲೇ ಬದಲಿ ಸಮಿತಿ ರಚಿಸಿ ಫಲಾನುಭವಿಗಳಿಗೆ ಹಕ್ಕು ನೀಡಬೇಕಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಅನುರಾಧ, ಸಿಒ ಶಿವರಾಮೇ ಗೌಡ, ಉಪ ವಿಭಾಗಾಧಿಕಾರಿಗಳಾದ ದರ್ಶನ್‌, ಟಿ.ವಿ. ಪ್ರಕಾಶ್‌ ಮತ್ತಿತರರು ಇದ್ದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next