ಹೊಸನಗರ: ಚಾರಣಿಗರ ನೆಚ್ಚಿನ ಸ್ಪಾಟ್, ಮೂಕಾಂಬಿಕೆ ಭಕ್ತರ ಧಾರ್ಮಿಕ ಶ್ರದ್ಧಾಕೇಂದ್ರ ಭುವನಗಿರಿ ಕೊಡಚಾದ್ರಿ ಗಿರಿಯಲ್ಲಿ ಪ್ರವಾಸಿಗರ ವರ್ಷಾಚರಣೆ ನಿರ್ಬಂಧಿ ಸುವ ಸಾಧ್ಯತೆ ಹೆಚ್ಚಿದೆ. ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಅಲ್ಲದೆ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶ ಹೊಂದಿರುವ ಕೊಡಚಾದ್ರಿ ಗಿರಿಗೆ ಬರುವ ಪ್ರವಾಸಿಗರು ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿ ಸಂಭ್ರಮದೊಂದಿಗೆ ಹೊಸವರ್ಷ ಸ್ವಾಗತಿಸುತ್ತಿದ್ದರು. ಅಲ್ಲದೆ ಅಲ್ಲಲ್ಲಿ ಬೆಂಕಿ ಹಾಕಿ ಸಂಭ್ರಮಿಸಿದ್ದು ಉಂಟು. ಆದರೆ ಈ ಬಾರಿ ಇದಕ್ಕೆಲ್ಲ ಬ್ರೇಕ್ ಹಾಕಲು ಕೊಲ್ಲೂರು ವಿಭಾಗದ ವನ್ಯ ಜೀವಿ ವಲಯ ನಿರ್ಧಾರ ಮಾಡಿದೆ.
Advertisement
ತಂಗಲು ಅವಕಾಶ ಬೇಡ: ಈ ಸಂಬಂಧ ಹೊಸನಗರ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವ ಕೊಲ್ಲೂರು ವನ್ಯ ಜೀವಿ ವಿಭಾಗ ಇದೇ ತಿಂಗಳ ಡಿ.28ರಿಂದ ಜನವರಿ 1 ತನಕ ಪ್ರವಾಸಿಗರಿಗೆ ಕೊಡಚಾದ್ರಿ ಪ್ರವಾಸಿ ಮಂದಿರದಲ್ಲಿ ತಂಗಲು ಅವಕಾಶ ನೀಡದಂತೆ ಮನವಿ ಮಾಡಿದೆ. ತಂಗಲು ಅವಕಾಶ ನೀಡಿದಲ್ಲಿ ಮೋಜು ಮಸ್ತಿಯ ಜೊತೆಗೆ ಬೆಂಕಿ ಶಿಬಿರ ಆಯೋಜಿಸುವ ಸಾಧ್ಯತೆ ಇದೆ. ಕೊಡಚಾದ್ರಿ ಗಿರಿಯ ಸುತ್ತಲೂ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಇದ್ದು ಅನಾಹುತಕ್ಕೆ ದಾರಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಕೊಲ್ಲೂರು ವನ್ಯಜೀವಿ ಅರಣ್ಯ ವಿಭಾಗ ಪ್ರವಾಸಿ ಮಂದಿರದಲ್ಲಿ ಅವಕಾಶ ನೀಡದಂತೆ ಹೊಸನಗರ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ.
Related Articles
Advertisement