Advertisement

ಬಿದನೂರಿನ ಕಲ್ಮಠಗಳಿಗೆ ಬೇಕಿದೆ ಕಾಯಕಲ್ಪ

03:47 PM Jan 20, 2020 | Naveen |

ಹೊಸನಗರ: ಕೆಳದಿ ಅರಸರ ಅಪೂರ್ವ ಶಿಲ್ಪಕಲೆಗಳನ್ನು ಹೊಂದಿದ 12 ಮತ್ತು 20 ಅಡಿ ವಿಸ್ತೀರ್ಣದ ಎರಡು ಕಲ್ಮಠಗಳು ಐತಿಹಾಸಿಕ ಬಿದನೂರು ಕೋಟೆಯ ಅನತಿ ದೂರದಲ್ಲಿದ್ದರೂ ಯಾರ ಕಣ್ಣಿಗೂ ಬೀಳದೇ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.

Advertisement

ಅಂದು ಔರಂಗಜೇಬನ ಸೇನೆ ಸೋಲಿಸಿ ಹಿಮ್ಮೆಟ್ಟಿಸಿದ ಕಾರಣಕ್ಕೆ
ಇವು ನಿರ್ಮಾಣವಾದವೆಂಬ ಪ್ರತೀತಿ ಇದೆ. ಕೆಳದಿ ಸಾಮ್ರಾಜ್ಯದ ಲಾಂಛನ ಗಂಡಬೇರುಂಢವನ್ನು ಹುದುಗಿಸಿಕೊಂಡ ಅಪೂರ್ವ ಶಿಲ್ಪಕಲಾ ನೈಪುಣ್ಯದ ಚಿತ್ತಾರ ಹೊಂದಿವೆ.

ಬಿದನೂರು ಕೋಟೆಯಿಂದ ಸುಮಾರು 300 ಮೀ. ದೂರದ ಕೋಟೆಕೆರೆಯ ಮತ್ತೂಂದು ಭಾಗದಲ್ಲಿರುವ ಕಲ್ಮಠ ಅನಾಥವಾಗಿದೆ. ಈ ಪ್ರದೇಶದಲ್ಲಿ ಸುಮಾರು 100 ಮೀ. ಅಂತರದಲ್ಲಿ ಎರಡು ಕಲ್ಮಠಗಳಿದ್ದು ಪಾಳು ಬಿದ್ದಿವೆ. ಅನಾಥವಾದ ಸ್ಮಾರಕಗಳು: ಬಿದನೂರನ್ನು ಮುತ್ತಿಕ್ಕಿದ ಔರಂಗಜೇಬನ ಮಹಾಸೇನೆಯನ್ನು ಕೆಳದಿ ರಾಣಿ ಚೆನ್ನಮ್ಮ ಸೇನೆ ಹಿಮ್ಮೆಟ್ಟಿಸಿದ ಖುಷಿಯಲ್ಲಿ ಈ ಕಲ್ಮಠ ಕಟ್ಟಲಾಗಿದೆಯಂತೆ. ಅದಕ್ಕೆ ಪೂರಕವೆಂಬಂತೆ ಆನೆ ಮೇಲೆ ಕುಳಿತು ಔರಂಗಜೇಬ ಹೋರಾಡುತ್ತಿರುವ ದೃಶ್ಯ ಮತ್ತು ಕುದುರೆ ಮೇಲೆ ಕುಳಿತು ಚೆನ್ನಮ್ಮ ಹೋರಾಡುತ್ತಿರುವ ದೃಶ್ಯ ಉಬ್ಬುಶಿಲ್ಬದಲ್ಲಿ ಸೆರೆಯಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ. ಪುರಾತತ್ವ ಇಲಾಖೆಗೂ ಮಾಹಿತಿ ಇದ್ದಂತಿಲ್ಲ. ಒಂದು ಕಲ್ಮಠದಲ್ಲಿ ಸುಮಾರು 3 ಅಡಿ ಎತ್ತರದ ಬಸವಣ್ಣನ ವಿಗ್ರಹ ಇದ್ದು, ಗೆದ್ದಲು ಹುತ್ತ ನುಂಗಿ ಹಾಕಿದೆ.

ಇನ್ನೊಂದು ಕಲ್ಮಠದಲ್ಲಿ ಕೇವಲ ಪೀಠ ಮಾತ್ರ ಇದ್ದು
ವಿಗ್ರಹ ನಾಪತ್ತೆಯಾಗಿದೆ. ಒಮ್ಮೆ ನೋಡಲೇ ಬೇಕು: 12*20
ಅಡಿ ವಿಸ್ತೀರ್ಣದಲ್ಲಿ ಮೇಳೈಸಿರುವ ಎರಡು ಕಲ್ಮಠಗಳು ನಾಲ್ಕು ಅಡಿ ಎತ್ತರದ ಅ ಷ್ಠಾನದ ಮೇಲೆ ಭಿತ್ತಿ ಮಾಡಲಾಗಿದೆ. ಮೇಲೆ ಶಿಖರ ಸೇರಿ ಸುಮಾರು 15 ಅಡಿಗಿಂತಲೂ ಎತ್ತರವಿದೆ. ಒಂದು ಕಲ್ಮಠ ನವಸ್ಥಂಭದ ಮೇಲೆ ಮೇಳೈಸಿದರೆ, ಮತ್ತೂಂದು ಕಲ್ಮಠ ಆರು ಸ್ಥಂಭದ ಮೇಲೆ ನಿರ್ಮಾಣಗೊಂಡಿದೆ. ಈ ಎರಡೂ ಕಲ್ಮಠದಲ್ಲಿ ಗಂಡಭೇರುಂಡ ಲಾಂಛನ ಜತೆಗೆ ರಾಣಿ ಕೆಳದಿ ಚೆನ್ನಮ್ಮರದ್ದು ಎಂದೇ ಹೇಳಲಾದ ವಿವಿಧ ಆಯುಧ ಹಿಡಿದು ಹೋರಾಡುತ್ತಿರುವ ಸುಮಾರು 21ಕ್ಕೂ ಹೆಚ್ಚು ಉಬ್ಬು ಶಿಲ್ಪಗಳು ನೋಡುಗರನ್ನು ಕುತೂಹಲಕ್ಕೀಡು ಮಾಡುತ್ತವೆ. ಸುತ್ತಲೂ ಕಪಿಚೇಷ್ಟೆಗಳ ವಿವಿಧ ಚಿತ್ತಾರದೊಂದಿದೆ ನಡುವೆ ಧ್ಯಾನಕ್ಕೆ ಕುಳಿತ ವಿರಕ್ತರ ದೃಶ್ಯವಿದೆ. ಇನ್ನು ಮಲ್ಲ ಯುದ್ಧ, ವಿವಿಧ ನೃತ್ಯರೂಪಕ, ಪಂಚಮುಖೀ ಗೋವು, ಆನೆ ಮತ್ತು ಬಸವ ಎರಡು ಮುಖದೊಂದಿಗೆ ಸಮ್ಮಿಳಿತಗೊಂಡ ಚಿತ್ತಾರ, ಮಾನವರೂಪಿ ಸಿಂಹಿಣಿ ಹೀಗೆ ನೂರಕ್ಕೂ ಹೆಚ್ಚು ಚಿತ್ರವಿರುವ ಶಿಲ್ಪಕಲಾ ವೈಭವದಿಂದ ಕಂಗೊಳಿಸುವಂತಿದೆ.

ಅಜ್ಞಾತ ಸ್ಥಳದಲ್ಲಿರುವ ಸ್ಮಾರಕ
ಕೆಳದಿ ಸಾಮ್ರಾಜ್ಯದ ಶಿಲ್ಪಕಲಾ ನೈಪುಣ್ಯಕ್ಕೆ ಸಾಕ್ಷಿಯಂತಿರುವ ಈ ಕಲ್ಮಠಗಳು ಕೋಟೆಕೆರೆಯ ಮತ್ತೂಂದು ಮಗ್ಗಲಲ್ಲಿದೆ. ಆದರೆ ಈ ಬಗ್ಗೆ ಬಿದನೂರು ಸುತ್ತಮುತ್ತಲಿನ ಜನರಿಗೂ ಮಾಹಿತಿ ಇದ್ದಂತಿಲ್ಲ. ಕೆಳದಿ ಅರಸರ ರಾಜಧಾನಿಯಾಗಿದ್ದ ಕಾಲದಲ್ಲಿ ಇದ್ದ ವೈಭವ, ಯುದ್ಧ ಸಂಸ್ಕೃತಿ, ಜನಪದ ಸಂಸ್ಕೃತಿ, ಸಾಂಸ್ಕೃತಿಕ, ಭಾವೈಕ್ಯತೆ ಹೀಗೆ ಎಲ್ಲವನ್ನೂ ಒಟ್ಟಾರೆ ಬಿಂಬಿಸುವ ಕಲ್ಮಠ ಬಗ್ಗೆ ಪುರಾತತ್ವ ಇಲಾಖೆ ಅಧ್ಯಯನಕ್ಕೆ ಮುಂದಾದಲ್ಲಿ ಕೆಳದಿ ಅರಸರ ಕಾಲದ ಮಹತ್ವದ ಅಂಶಗಳು ಬೆಳಕಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ಮುಂದಾಗಬೇಕಿದೆ.

Advertisement

ಕೆಳದಿ ಅರಸರ ಕಲಾ ನೈಪುಣ್ಯಕ್ಕೆ ಹಿಡಿದ ಕನ್ನಡಿ
ಕಲ್ಮಠ ಕೇವಲ ಕಟ್ಟಡವಲ್ಲ. ಕೆಳದಿ ಅರಸರ ಕಾಲದಲ್ಲಿ ಶಿಲ್ಪಕಲಾ
ನೈಪುಣ್ಯ ಹೇಗಿತ್ತು ಎಂಬುದಕ್ಕೆ ಮಹತ್ವದ ಸಾಕ್ಷಿಯಾಗಿದೆ. 1675ರ ಹೊತ್ತಿಗೆ ಬಿದನೂರನ್ನು ಮುತ್ತಿದ ಔರಂಗಜೇಬನ ಸೇನೆಯನ್ನು ಕೆಳದಿ ರಾಣಿ ಚೆನ್ನಮ್ಮ ಹಿಮ್ಮೆಟ್ಟಿಸಿದ ವಿಜಯದ ಸಂಕೇತವಾಗಿ ಕಟ್ಟಲಾಗಿದೆ ಎಂಬ ಪ್ರತೀತಿ ಇದೆ. ಅದಕ್ಕೆ ಇದರಲ್ಲಿರುವ ಕೆತ್ತನೆಗಳು ಸಾಕ್ಷೀಕರಿಸುತ್ತವೆ. ಅನಾಥವಾಗಿರುವ ಎರಡೂ ಕಲ್ಮಠದಲ್ಲಿ ಐತಿಹಾಸಿಕವಾಗಿ ಸಾಕಷ್ಟು ಮಾಹಿತಿಗಳಿವೆ.

ಕಲ್ಮಠ ಬೆಳಕಿಗೆ ಬಾರದ ಉತ್ತಮ ಕಲಾಕೃತಿ. ಪುರಾತತ್ವ ಇಲಾಖೆಯ
ಗಮನಕ್ಕೆ ಬಾರದಿರುವುದು ಸೋಜಿಗ. ಸ್ಥಳೀಯರ
ಸಹಕಾರ ಪಡೆದು ಕಲ್ಮಠದ ಸಂರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಲಿ. ಅಲ್ಲದೆ ಮುಂದಿನ ಪೀಳಿಗೆಗೆ ಇತಿಹಾಸ ಪಳಿಯುಳಿಕೆಗಳ ಅಗತ್ಯವಿದೆ.
ಶ್ರೀಧರ ಶೆಟ್ಟಿ, ಚಿಕ್ಕಪೇಟೆ

ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next