ಹೊಸನಗರ: ಅಧ್ಯಕ್ಷ ಸ್ಥಾನಕ್ಕೆ ತಾಪಂ ಅಧ್ಯಕ್ಷ ವಾಸಪ್ಪ ಅವರು ಶುಕ್ರವಾರ ಮತ್ತೆ ರಾಜೀನಾಮೆ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷದ ಒಡಂಬಡಿಕೆ ಹಾಗೂ ವರಿಷ್ಟರ ಒತ್ತಾಯದ ಮೇರೆಗೆ ಈ ಹಿಂದೆ ಅಧ್ಯಕ್ಷ ಗಾದಿಗೆ ಜ.16ರಕ್ಕೆ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷರಾದ ವಾಸಪ್ಪ ಗೌಡ ಅವರು ಬಿಜೆಪಿ ಮುಖಂಡರ ಹಾಗೂ ಕೆಲ ಸದಸ್ಯರ ಬೆಂಬಲದಿಂದ ಈ ಹಿಂದೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಜ.27ರಂದು ವಾಪಸ್ ಪಡೆದಿದ್ದರು.
ಅವಿಶ್ವಾಸಕ್ಕೆ ಮೊರೆ: ಮೊದಲು ಬಿಜೆಪಿಗೆ ಹಾಗೂ ನಂತರ ಕಾಂಗ್ರೆಸ್ ಎರಡೂ ಪಕ್ಷಕ್ಕೆ ದ್ರೋಹ ಬಗೆದ ಗೌಡರಿಗೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ಇಬ್ಬರು ಮಹಿಳಾ ಸದಸ್ಯ ಬೆಂಬಲದಿಂದ ಅವಿಶ್ವಾಸ ನಿರ್ಣಯ ಮಂಡಿಸಲು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲು ತಯಾರಿ ನಡೆಸಿತ್ತು. ಈ ನಿರ್ಣಯಕ್ಕೆ ಪಕ್ಷೇತರಾರಾಗಿ ಆಯ್ಕೆಯಾಗಿ ಬಿಜೆಪಿ ಸೇರಿದ್ದ ಸದಸ್ಯ ವೀರೇಶ್ ಆಲುವಳ್ಳಿ ಸಹ ಜೋಡಿಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಎರಡು ದೋಣಿಯಲ್ಲಿ ಕಾಲು ಹಾಕಿದ ವಾಸಪ್ಪ ಗೌಡರು ಮತ್ತೆ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ತಾಪಂ 12 ಸದಸ್ಯರಲ್ಲಿ 6 ಬಿಜಪಿ 5 ಕಾಂಗ್ರೆಸ್ ಹಾಗೂ ಒಬ್ಬರು ಪಕ್ಷೇತರರು ಇದ್ದರು. ಪಕ್ಷೇತರ ಅಭ್ಯರ್ಥಿ ವೀರೇಶ್ ಆಲುವಳ್ಳಿ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವೀರೇಶ ಬಿಜೆಪಿ ಸೇರ್ಪಡೆ ಆಗಿದ್ದರು. ಆದರೆ ಗ್ರಾಪಂ ಹಾಗೂ ತಾಪಂ ಎರಡೂ ಸದಸ್ಯತ್ವ ಹೊಂದಿದ್ದ ಬಿಜೆಪಿ ಇಬ್ಬರು ಮಹಿಳಾ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಹೈಕೋರ್ಟ್‌ನಿಂದ ಸದಸ್ಯ ಬಿ.ಜಿ.ಚಂದ್ರಮೌಳಿ ತಡೆಯಾಜ್ಞೆ ತಂದಿದ್ದರು. ಬಿಜೆಪಿ ಸದಸ್ಯರ ಗುಂಪಿನಿಂದ ವಾಸಪ್ಪ ಗೌಡ ಅವರನ್ನು ಬೇರ್ಪಡಿಸಿ ಕಾಂಗ್ರೆಸ್ ಸದಸ್ಯರು ಇದ್ದ ರೆಸಾರ್ಟ್‌ಗೆ ಸೆಳೆಯುವಲ್ಲಿ ಕಾಂಗ್ರೆಸ್ ಸಫಲವಾಗಿತ್ತು.
ಅಂದು ನಡೆದ ಚುನಾವಣೆಯಲ್ಲಿ ಇಬ್ಬರು ಸದಸ್ಯರು ಅಮಾನತಿನ ಕಾರಣ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ ಚುನಾವಣೆಗೆ ಬಹಿಷ್ಕಾರ ಹಾಕಿದ್ದರು. ಇದರಿಂದಾಗಿ 2016ರಲ್ಲಿ ವಾಸಪ್ಪಗೌಡ ಅನಾಯಾಸವಾಗಿ ತಾಪಂ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದರು.
ಅಧಿಕಾರ ಬಿಟ್ಟುಕೊಡದ ವಾಸಪ್ಪ ಗೌಡ: ಹೈಕೋರ್ಟ್ ಆದೇಶ ತರುವಲ್ಲಿ ಸಫಲರಾದ ಹಾಗೂ ಲಿಂಗಾಯತ ಜನಾಂಗಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಅಧ್ಯಕ್ಷ ಗಾದಿಯ ಎರಡನೇ ಅವಧಿಯನ್ನು ಬಿ.ಜಿ.ಚಂದ್ರಮೌಳಿ ಅವರಿಗೆ ಮರಳಿಸುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಿಮ್ಮನೆ ರತ್ನಾಕರ ಸಮ್ಮುಖದಲ್ಲಿ ಒಡಂಬಡಿಕೆ ಆಗಿತ್ತು ಎನ್ನಲಾಗಿದೆ. ಆದರೆ ಒಳ ಒಪ್ಪಂದಕ್ಕೆ ಒಪ್ಪಿದ ವಾಸಪ್ಪ ಗೌಡ ರಾಜೀನಾಮೆ ನೀಡಿ, ಹಿಂಪಡೆದಿದ್ದರು. ಇದರ ಬೆನ್ನಲ್ಲೆ 6 ಜನ ತಾಪಂ ಸದಸ್ಯರು ಅವಿಶ್ವಾಸ ಮಂಡನೆಗೆ ಅವಕಾಶ ಕೋರಿ ಮನವಿ ಸಲ್ಲಿಸಿದ್ದರು.
ಶುಕ್ರವಾರ ಮತ್ತೆ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ತೆರಳಿದ ವಾಸಪ್ಪ ಗೌಡ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು ಅಂಗೀಕರಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ. ಹೊಸನಗರ ತಾಪಂನಲ್ಲಿ ದಿನಕ್ಕೊಂಡು ರಾಜಕೀಯ ಪ್ರಹಸನ ನಡೆಯುತ್ತಿದ್ದು ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.