Advertisement

ಬೆಳೆ ವಿಮೆ ಸಿಗದೆ ರೈತರ ಪರದಾಟ

01:32 PM Jan 10, 2020 | Naveen |

ಹೊಸನಗರ: ಪ್ರಕೃತಿ ವಿಕೋಪ, ಅತಿವೃಷ್ಟಿಯ ಸಂದರ್ಭದಲ್ಲಿ ಬೆಳೆ ಕಳೆದುಕೊಂಡಾಗ ಅಪತ್ಕಾಲದಲ್ಲಿ ನೆರವಾಗಲಿ ಎಂದು ರೈತರು ವಾರ್ಷಿಕ ಕಂತು ಕಟ್ಟಿ ಬೆಳೆವಿಮೆ ಮಾಡಿಸಿದ್ದೇನೋ ಸರಿ. ಆದರೆ ಇಲ್ಲೊಂದು ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆವಿಮೆ ಪರಿಹಾರ ಪಡೆಯುವಲ್ಲಿ ಅರ್ಹರಾದರೂ ಯಾವೊಬ್ಬ ರೈತರಿಗೂ ಬೆಳೆವಿಮೆ ಸಿಗದೆ ಆತಂಕ ಪಡುವಂತಾಗಿದೆ.

Advertisement

ನಗರ ಹೋಬಳಿಯ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ರೈತರ ಅತಂತ್ರ ಸ್ಥಿತಿ ಇದು. ಈ ಭಾಗದ 250ಕ್ಕೂ ಹೆಚ್ಚು ರೈತರು ತಮ್ಮ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಮಾಡಿಸಿದ್ದರು. ಆದರೆ ನಗರ ಹೋಬಳಿಯಲ್ಲಿ ಕಳೆದ ಎರಡು ವರ್ಷ ಕಂಡು ಕೇಳರಿಯದ ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿತ್ತು. ಆದರೆ ಆಪತ್ಕಾಲದಲ್ಲಿ ನೆರವಾಗಲಿ ಎಂದು ಮಾಡಿಸಿದ್ದ ಬೆಳೆವಿಮೆ ಕೂಡ ಸಿಗದೆ ಅಡಕೆ ಬೆಳೆಗಾರರು ಸೇರಿದಂತೆ ರೈತರು ಪರದಾಡುವಂತಾಗಿದೆ.

289 ಇಂಚು ಮಳೆ: ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಒಂದೇ ವರ್ಷದಲ್ಲಿ 289 ಇಂಚು ಮಳೆ ಸುರಿದಿತ್ತು. ಆ ಮಳೆಗೆ ಪ್ರತಿಯೊಬ್ಬ ರೈತರ ಫಸಲು ನಾಶವಾಗಿತ್ತು. ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪನಿ ನಿಯಮಾವಳಿಯಂತೆ ಬೆಳೆವಿಮೆ ಮಾಡಿಸಿದ್ದರೂ ಕೂಡ ಯಾರೊಬ್ಬರಿಗೂ ನಯಾಪೈಸೆ ಸಂದಾಯವಾಗಿಲ್ಲ.

ತೋಟಗಾರಿಕಾ ಇಲಾಖೆಯೋ.. ಇಲ್ಲ ವಿಮಾ ಕಂಪನಿಯೋ..: ಈಗಾಗಲೇ ಬೆಳೆವಿಮೆ ಸಕಾಲಕ್ಕೆ ಪಾವತಿಯಾಗದೆ ಸಾಕಷ್ಟು ಸುದ್ದಿಗೂ ಗ್ರಾಸವಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೆಲವರಿಗೆ ಪರಿಹಾರ ಬಂದಿದ್ದರೆ ಹಲವರಿಗೆ ಬಂದಿಲ್ಲ. ಈ ಬಗ್ಗೆ ವಿಮಾ ಕಂಪನಿಗೆ ಕರೆ ಮಾಡಿದರೆ ಯಾವುದೇ ಸ್ಪಂದನೆ ಸಿಗದ ಕಾರಣ ಜಿಲ್ಲಾಧಿಕಾರಿಗಳ ತನಕ ವಿಷಯ ಪ್ರಸ್ತಾಪವಾಗಿತ್ತು. ಬಳಿಕ ಸಂಬಂಧಪಟ್ಟ ತೋಟಗಾರಿಕಾ ಮತ್ತು ವಿಮಾ ಕಂಪನಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೂ ಕೂಡ ವಿಮೆ ಪಾವತಿಯಾಗದಿರುವುದು ರೈತರ ಕೆಂಗಣ್ಣಿಗೆ ಕಾರಣವಾಗಿದೆ.

ತೋಟಗಾರಿಕೆ ಇಲಾಖೆಯನ್ನು ಕೇಳಿದರೆ ವಿಮಾ ಕಂಪನಿ ಕಡೆ ಬೊಟ್ಟು ಮಾಡುತ್ತಾರೆ.ವಿಮಾ ಕಂಪನಿ ಕಾಲ್‌ ರೀಸೀವ್‌ ಮಾಡೋದಿಲ್ಲ. ಯಾರನ್ನು ಕೇಳಬೇಕು ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ ರೈತರು. ಹವಾಮಾನ ಆಧಾರಿತ ಬೆಳೆವಿಮೆಯನ್ನು
ಆಯಾಯ ಪ್ರದೇಶದಲ್ಲಿ ಸುರಿಯುವ ಮಳೆಯನ್ನು ಆಧರಿಸಿ ನೀಡಲಾಗುತ್ತದೆ. ಪ್ರತಿ ಗ್ರಾಪಂ ಕಚೇರಿಯಲ್ಲೂ ಮಳೆಮಾಪಕವನ್ನು ಕೂಡ ಅಳವಡಿಸಲಾಗಿದೆ. ಆದರೆ ಅರಮನೆಕೊಪ್ಪ ಗ್ರಾಪಂನ ಮಳೆ ಪ್ರಮಾಣ ತೆಗೆದು ನೋಡಿದರೆ.. ಲೆಫ್ಟ್‌ ಔಟ್‌.. ನೋ ಕ್ಲೈ ಂ ಎಂದು ತೋರಿಸುತ್ತದೆ. ಇದರಿಂದಾಗಿ ಪಂಚಾಯತ್‌ ವ್ಯಾಪ್ತಿಯ ಪ್ರತಿ ರೈತರು ಬೆಳೆವಿಮೆಯಿಂದ ದೂರ ಉಳಿಯುವಂತಾಗಿದೆ.

Advertisement

ಬೆಳೆವಿಮೆ ಸಮಸ್ಯೆ ಕುರಿತಂತೆ ವಿಮಾ ಕಂಪನಿ ಮತ್ತು ತೋಟಗಾರಿಕಾ ಇಲಾಖೆಯನ್ನು ಪದೇ ಪದೇ ಸಂಪರ್ಕಿಸಲಾಗುತ್ತಿದೆ. ಆದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬೆಳೆವಿಮೆ ಕೂಡ ಪಾವತಿಸುವಲ್ಲಿ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಈ ಭಾಗದ ರೈತರು ಒಟ್ಟಾಗಿ ಗ್ರಾಹಕರ ವೇದಿಕೆಗೆ ದೂರು ನೀಡುವ ಬಗ್ಗೆ ಚಿಂತಿಸಲಾಗಿದೆ.
ಕೆ.ವಿ. ಕೃಷ್ಣಮೂರ್ತಿ, ಕೃಷಿಕ,

ಅರಮನೆಕೊಪ್ಪ ಗ್ರಾಪಂಗೆ ಸಂಬಂಧ ಪಟ್ಟಂತೆ ಬೆಳೆವಿಮೆ ಪಾವತಿಸುವಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಈ ಕುರಿತೂ ವಿಮಾ ಕಂಪನಿ ಪ್ರತಿನಿಧಿಗಳ ಜೊತೆ ಮಾತನಾಡಲಾಗಿದೆ. ರೈತರಿಗೆ ಶೀಘ್ರದಲ್ಲಿ ಬೆಳೆವಿಮೆ ವಿತರಣೆಯಾಗಲಿದೆ.
.ಯೋಗೇಶ್‌,
ಉಪನಿರ್ದೇಶಕರು,
ತೋಟಗಾರಿಕಾ ಇಲಾಖೆ ಶಿವಮೊಗ್ಗ

„ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next