Advertisement

ಬಿದನೂರು ಅರಸರ ಸಮಾಧಿ ಸ್ಥಳ ಅಭಿವೃದ್ಧಿ

12:41 PM Sep 25, 2019 | Naveen |

„ಕುಮುದಾ ನಗರ
ಹೊಸನಗರ: ಐತಿಹಾಸಿಕವಾಗಿ ತನ್ನದೇ ಮಹತ್ವ ದಾಖಲಿಸಿರುವ ತಾಲೂಕಿನ ಬಿದನೂರು ನಗರದಲ್ಲಿರುವ ಕೆಳದಿ ಅರಸರ ಸಮಾಧಿ ಸ್ಥಳದ ಬಗ್ಗೆ ಪುರಾತತ್ವ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.

Advertisement

ಅಭದ್ರತೆ ಮತ್ತು ಹಾಳುಕೊಂಪೆಯಂತಾಗಿದ್ದ ಹೊಸನಗರ ತಾಲೂಕಿನ ನಗರ- ಚಿಕ್ಕಪೇಟೆಯಿಂದ ಕೊಲ್ಲೂರಿಗೆ ಹೋಗುವ ಹೆದ್ದಾರಿ ಪಕ್ಕದಲ್ಲೆ ಕಾಣಸಿಗುವ ಶ್ರೀಧರಪುರದ ಬಿದನೂರು ಅರಸರ ಸಮಾಧಿ  ಸ್ಥಳದ ಅಭಿವೃದ್ಧಿಗೆ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಮುಂದಾಗಿದೆ.

ರೂ.50 ಲಕ್ಷ ವೆಚ್ಚದ ಅಭಿವೃದ್ಧಿಯ ನೀಲನಕ್ಷೆ!: ಎರಡು ತಿಂಗಳ ಹಿಂದೆ ನಿ ಧಿ ಚೋರರ ಅಟ್ಟಹಾಸಕ್ಕೆ ಧ್ವಂಸಗೊಂಡಿದ್ದ ಅರಸರ ಸಮಾಧಿ  ಸ್ಥಳಕ್ಕೆ ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ, ಭದ್ರತೆ ಮತ್ತು
ಅಭಿವೃದ್ಧಿ ಸಂಬಂಧ ಮಾಹಿತಿ ಕಲೆಹಾಕಿದೆ. ಅಲ್ಲದೆ ಅಂದಾಜು ರೂ. 50 ಲಕ್ಷ ವೆಚ್ಚದಲ್ಲಿ ಸಮಾಧಿ ಸ್ಥಳವನ್ನು ವಾಯುವಿಹಾರಕ್ಕೆ ಪೂರಕವಾಗಿ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ನೀಲನಕ್ಷೆ ನಕ್ಷೆ ತಯಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ನಿಧಿಚೋರರ ಅಟ್ಟಹಾಸಕ್ಕೆ ನಲುಗಿದ ಸಮಾಧಿ !: ಮೂರು ದಶಕಗಳ ಹಿಂದೆ ಇತಿಹಾಸ ಸಂಶೋಧಕ ದಿ| ಶಂಕರನಾರಾಯಣ ರಾವ್‌ ಬೆಳಕಿಗೆ ತಂದಿದ್ದ ಈ ಅರಸರ ಸಮಾಧಿ  ಸ್ಥಳವನ್ನು ಪುರಾತತ್ವ ಇಲಾಖೆ ಕೂಡ ಗುರುತಿಸಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸುತ್ತಲೂ
ತಂತಿ ಬೇಲಿ ಅಳವಡಿಸಿತ್ತು. ನಂತರ ನಿರ್ಲಕ್ಷ್ಯಕ್ಕೆ ಒಳಗಾದ ಸಮಾಧಿ  ಸ್ಥಳ ನಿಧಿಚೋರರ ಅಟ್ಟಹಾಸಕ್ಕೆ ನಲುಗಿತ್ತು. ಈಗಾಗಲೇ ಎರಡು ಬಾರಿ ನಿಧಿಯಾಸೆಗಾಗಿ ಸಮಾಧಿಗಳನ್ನು ಧ್ವಂಸಗೊಳಿಸಲಾಗಿತ್ತು. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತೀಚಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸಮಾಧಿ ಮೇಲೆ ನಿರಂತರ ದಾಳಿಯಾಗುತ್ತಿರುವ ಕಾರಣ ರಾಜ್ಯ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡು ಮೂವರು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲು ಕೂಡ ಮುಂದಾಗಿದೆ.

ಸುಂದರವಾಗಿ ಅಭಿವೃದ್ಧಿ: ಅಧಿಕಾರಿಗಳು ತಯಾರಿಸಲು ನಿರ್ಧರಿಸಿರುವ ಅಂದಾಜು 50 ಲಕ್ಷ ರೂ. ಅಭಿವೃದ್ಧಿಯ ನೀಲಿನಕ್ಷೆಯಲ್ಲಿ ಸುಂದರವಾದ ಸ್ವಾಗತ ಕಮಾನು, ನೆಲಹಾಸು, ಸುಮಾರು 2 ಎಕರೆಗಿಂತಲೂ ಹೆಚ್ಚಿರುವ ಪ್ರದೇಶದ ಸುತ್ತ ಬೇಲಿ ನಿರ್ಮಾಣ, ಸಮಾಧಿಗಳ ಬಗ್ಗೆ ಮಾಹಿತಿ ಫಲಕ, ಸಮಾ ಧಿ ಸ್ಥಳದ ರಸ್ತೆ, ಚಿಕ್ಕಪೇಟೆ ಸರ್ಕಲ್‌ ಮತ್ತು ಕೋಟೆ  ಭಾಗದಲ್ಲಿ
ಮಾರ್ಗಸೂಚಿ ಫಲಕ, ಮತ್ತು 10 ಹೆಚ್ಚು ಸಮಾಧಿಗಳನ್ನು ಹಳೆಯ ಮಾದರಿಯಲ್ಲೇ ಹೊರಭಾಗದ ಪುನರ್ನಿರ್ಮಾಣ ಸೇರಿದಂತೆ ಅಂಶಗಳು ಸೇರಿವೆ. ಸಂಜೆಯ ವಾಯುವಿಹಾರಕ್ಕೆ ಪೂರಕವಾಗಿ ನೆಲಹಾಸು ಮತ್ತು 15 ಕಲ್ಲುಮಂಚ ಅಳವಡಿಸಲು ಕೂಡ ನೀಲನಕ್ಷೆಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ.

Advertisement

ಒಟ್ಟಾರೆ ಕೆಳದಿ ಅರಸರ ಸಮಾಧಿಗಳು ಎಂದು ಕರೆಯಲ್ಪಡುವ ಶ್ರೀಧರಪುರ ಸಮಾಧಿಗಳ ಅಭಿವೃದ್ಧಿ ಬಗ್ಗೆ ಸಾಕಷ್ಟು ವರ್ಷಗಳ ಬೇಡಿಕೆ ಇತ್ತು. ಈ ನಡುವೆ ಸಮಾಧಿಗಳ ಧ್ವಂಸ ಪ್ರಕರಣಗಳು ಕೂಡ ಸ್ಥಳೀಯರು ಮತ್ತು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಪುರಾತತ್ವ ಇಲಾಖೆ ತಡವಾಗಿಯಾದರೂ ಎಚ್ಚೆತ್ತು ಅಭಿವೃದ್ಧಿಗೆ ಮುಂದಾಗಿರುವುದನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next