ಹೊಸನಗರ: ಕೋಟೆಯ ಒಳ ಹೊಕ್ಕಾಗ ನಿಮಗೆ ಸಿಗುವ ಹಸಿರುಗಂಬಳಿ ಸ್ವಾಗತ. ಇಡೀ ಕೋಟೆಯನ್ನು ಸುತ್ತುವಾಗಲೂ ಮುಂದುವರಿಯುವುದರಲ್ಲಿ ಅನುಮಾನ ಬೇಡ. ರಾಜ ದರ್ಬಾರ್ ಎಂದು ಕರೆಸಿಕೊಳ್ಳುವ ವಿಶಾಲವಾದ ಪ್ರದೇಶ ಸೇರಿದಂತೆ ಕೋಟೆಯ ಒಳ, ಹೊರ ಆವರಣ ಎತ್ತ ನೋಡಿದರೂ ಹಸಿರಿನ ರಾಜ್ಯಾಭಾರ ಮೇಳೈಸುತ್ತದೆ.
ಹೌದು ಮಲೆನಾಡ ನಡುಮನೆ, ಅತೀಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಗುರುತಿಸಿಕೊಂಡಿರುವ ಬಿದನೂರು ಕೋಟೆ ಸಂಪೂರ್ಣ ಹಸಿರು ಕೋಟೆಯಾಗಿ ಮಾರ್ಪಟ್ಟಿದೆ. ಕೆಳದಿ ಅರಸರ ಮೂರನೇ ರಾಜಧಾನಿ ಬಿದನೂರನ್ನು ಸಾಕ್ಷೀಕರಿಸುವ ನಗರ ಕೋಟೆ.. ಹಸಿರು ಕೋಟೆಯಾಗಿ ಮಾರ್ಪಟ್ಟ ಬಗೆ ಇದು.
ಮಳೆಗಾಲ ಆರಂಭವಾಗುತ್ತಿದ್ದಂತೆ..!: ಜೂನ್‌ನಲ್ಲಿ ಮಳೆಯಾಗುತ್ತಿದ್ದಂತೆ ಕಂಡು ಬರುವ ಹಸಿರಿನ ಮೋಹಕತೆ ಡಿಸೆಂಬರ್ ತನಕವೂ ಆವರಿಸಿಕೊಳ್ಳುತ್ತದೆ. 3 ತಿಂಗಳು ಬಿರುಮಳೆಯಿಂದ, ನೀರಿನ ಹರಿವು, ಜಾರಿಕೆಯಿಂದಾಗಿ ಕೋಟೆ ಒಳಹೊಕ್ಕುವುದು ಕೊಂಚ ಕಷ್ಟ. ಮಳೆ ಬಿಡುವಿನ ನಂತರದಲ್ಲಿ ಕೋಟೆಯ ತುದಿಗೇರುವ ಹಾದಿ, ಅಕ್ಕ ತಂಗಿಯ ಕೆರೆ, ದರ್ಬಾರ್ ಹಾಲ್, ವಿಶಾಲವಾದ ಪ್ರಾಂಗಣದ ತುಂಬೆಲ್ಲ ಕೃತಕ ಲಾನ್ ಬೆಳೆಸಿದರೂ ಇಷ್ಟೊಂದು ಸುಂದರವಾಗಿ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬಷ್ಟು ಹಸಿರಿನ ಸೌಂದರ್ಯ ಇಲ್ಲಿ ಮನೆ ಮಾಡಿದೆ.
ಸುಮಾರು 25 ಎಕರೆಯಲ್ಲಿ ಕಂಡು ಬರುವ ಕೋಟೆ ಕೆರೆ, ನಡುವೆ ಹೆದ್ದಾರಿ.. ಪಕ್ಕದಲ್ಲಿ ಹಸಿರಿನ ದಿಬ್ಬ, ದಿಬ್ಬದ ಮೇಲಿನ ಬೃಹದಾಕಾರದ ಕಲ್ಲಿನ ಗೋಡೆ, ಬುರುಜುಗಳು ಹಸಿರಿನ ಸಂಗಮದಲ್ಲಿ ಕಣ್ಣು ಕುಕ್ಕುತ್ತವೆ.
ಸಂಜೆಹೊತ್ತು.. ಹಿತಾನುಭವದ ವಾತಾವರಣದಲ್ಲಿ ಕೋಟೆ ಒಳ ಹೊಕ್ಕುವುದೇ ಒಂದು ಅದ್ಭುತ ರಸಾನುಭವ. ಹಾಗಾಗಿ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರು ಕೂಡ ಸಂಜೆ ವಿಹಾರಕ್ಕೆ ಕೋಟೆಯನ್ನೇ ನೆಚ್ಚಿಕೊಳ್ಳುವುದು ಸಹಜ ಎನಿಸಿದೆ. ಮಳೆಗಾಲ ಆರಂಭವಾದಾಗಿನಿಂದ ಒಟ್ಟಾರೆ ಕೋಟೆಯ ಚಿತ್ರಣವೇ ಒಂದು ಅದ್ಭುತ ಕಲಾಕೃತಿ. ಅದರಲ್ಲೂ ಹಸಿರಿನ ಲೇಪನ ಇನ್ನಷ್ಟು ಮೆರುಗು ನೀಡಿದೆ.
ಹೆಚ್ಚಿದ ಪ್ರವಾಸಿಗರ ಸಂಖ್ಯೆ: ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸಿಗರು ಜಲಪಾತಗಳತ್ತ ಧಾವಿಸುವುದು ಮಾಮೂಲಿ. ಆದರೆ ಬಿದನೂರು ಕೋಟೆ ಸಂಪೂರ್ಣ ಹಸಿರುಟ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಒಟ್ಟಾರೆ ಹೊನ್ನೆಕಂಬಳಿ ಅರಸರು ನಿರ್ಮಿಸಿದ ನಗರ ಕೋಟೆ ತನ್ನದೇ ಮಹತ್ವವನ್ನು ಇತಿಹಾಸ ಪುಟದಲ್ಲಿ ದಾಖಲಿಸಿದೆ. ಈಗ ಮಳೆಗಾಲದಲ್ಲೂ ತನ್ನ ಹಸಿರು ಸೌಂದರ್ಯದಿಂದ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.