ಕುಮದಾ ನಗರ
ಹೊಸನಗರ: ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಹಸಿವು ನೀಗಿಸಿದ ವಿದ್ಯಾ ದೇಗುಲ ಇದು. 70 ವರ್ಷ ಹಳೆಯದಾದ ಈ ಸರ್ಕಾರಿ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಕೊಠಡಿಯೊಳಗೆ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ, ಜನಪ್ರತಿನಿ ಧಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಹೌದು, ಹೊಸನಗರ ತಾಲೂಕಿನ ಮೂಡುಗೊಪ್ಪ- ನಗರ ಗ್ರಾಪಂ ವ್ಯಾಪ್ತಿಯ ಬೈಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ದುರವಸ್ಥೆ ಇದು.
ಬಾರೀ ಹಳೆಯದಾದ ಕಟ್ಟಡವಾಗಿದ್ದು ಸಂಪೂರ್ಣ ಶಿಥಿಲಗೊಂಡು ಒಂದೊಂದೇ ಇಟ್ಟಿಗೆಗಳು ಕೆಳಗೆ ಬೀಳಲಾರಂಭಿಸಿವೆ. ಅಲ್ಲದೆ ಅಲ್ಲಲ್ಲಿ ತೀವ್ರತರದ ಬಿರುಕು ಬಿಟ್ಟಿದ್ದು ಆತಂಕ ಹುಟ್ಟಿಸಿದೆ. ನಾಲ್ಕು ಕೊಠಡಿ ಹೊಂದಿರುವ ಈ ಕಟ್ಟಡದಲ್ಲಿ ತರಗತಿ ನಡೆಸಲು ಸಾಧ್ಯವಾಗದೆ ಉಳಿದ ಕಟ್ಟಡದಲ್ಲಿ ಒಟ್ಟಿಗೆ ಒಂದರಿಂದ ಏಳನೇ ತರಗತಿಯನ್ನು ಒಟ್ಟಿಗೆ ಕೂರಿಸಿ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಸ್ವಾತಂತ್ರ್ಯ ಪೂರ್ವ ಕಟ್ಟಡ: ಬೈಸೆಯ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಶಾಲೆಯ ಮೂಲಗಳ ಪ್ರಕಾರ 7 ದಶಕ ಕಳೆದಿದೆ. ಸ್ವಾತಂತ್ರ್ಯ ಪೂರ್ವ ಅಂದರೆ 1947ರಲ್ಲಿ ಈ ಕಟ್ಟಡ ಸ್ಥಾಪನೆಯಾಯ್ತು ಎಂದು ಸ್ಥಳೀಯರು ಹೇಳುತ್ತಾರೆ. ಅಂದಿನಿಂದ ಈವರೆಗೆ ನಿರಂತರ ವಿದ್ಯಾದಾನ ಮಾಡುತ್ತ ಮೂಡುಗೊಪ್ಪ ಮತ್ತು ಅರಮನೆಕೊಪ್ಪ ಗ್ರಾಪಂ ಭಾಗದ ಜನರ ಮಹತ್ವದ ಶೈಕ್ಷಣಿಕ ಕೇಂದ್ರವಾಗಿತ್ತು. ಇದೀಗ ಸುಮಾರು 29 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು ಕಟ್ಟಡದ ದುಸ್ಥಿತಿಯಿಂದಾಗಿ ಸುಗಮ ವ್ಯಾಸಂಗ ಕಷ್ಟವಾಗಿದೆ.
ಕಟ್ಟಡಕ್ಕೇನು ಕೊರತೆ ಇಲ್ಲ; ತಜ್ಞರ ವರದಿ: ಭೀಕರ ಮಳೆಹಾನಿಗೆ ತುತ್ತಾದ ಸಂದರ್ಭದಲ್ಲಿ ಶಾಲಾ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಜಿಲ್ಲಾ ಧಿಕಾರಿಗಳು ವರದಿ ಕೇಳಿದ್ದರು. ಅಲ್ಲಿಗೆ ಭೇಟಿ ಕೊಟ್ಟ ಇಂಜನಿಯರ್ ಕಟ್ಟಡ ಪರಿಶೀಲಿಸಿ ಕಟ್ಟಡಕ್ಕೇನು ತೊಂದರೆ ಇಲ್ಲ ಎಂಬ ವರದಿ ರವಾನಿಸಿದ್ದರು. ಆದರೆ ಕಟ್ಟಡದ ದುಸ್ಥಿತಿ ಕಣ್ಣಿಗೆ ರಾಚುವಂತಿದ್ದರೂ ಅ ಧಿಕಾರಿಗಳು ಹೀಗೇಕೆ ವರದಿ ಕೊಟ್ಟರು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಹೊಸ ಕಟ್ಟಡಕ್ಕಾಗಿ ಕೆಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದು, ಇಂಜನಿಯರ್ ವರದಿಯಿಂದಾಗಿ ಹಿನ್ನೆಡೆಯಾಗಿದೆ.
ಶಿಕ್ಷಣ ಇಲಾಖೆ ಅಧಿ ಕಾರಿಗಳು ತುರ್ತು ಪರಿಶೀಲನೆ ನಡೆಸಿ ನೂತನ ಕಟ್ಟಡ ಮಂಜೂರು ಮಾಡುವಂತೆ ಬೈಸೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಾಲಾ ಆವರಣದಲ್ಲಿ ಪಾಳುಬಿದ್ದ ಬಾವಿ: ಬೈಸೆ ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಪಾಳು ಬಿದ್ದ ಬಾವಿ ಕಾಣಿಸುತ್ತದೆ. ಬಾವಿಯ ಕೈಪಿಡಿ ಕಿತ್ತು ಹೋಗಿ ಹಲವು ವರ್ಷಗಳೇ ಕಳೆದಿವೆ. ಅಲ್ಲದೆ ಬಾವಿಯೊಳಗೆ ಕಸಕಡ್ಡಿಗಳು ಬಿದ್ದು ನೀರಿಲ್ಲದಂತೆ ಆಗಿದೆ. ತೆರೆದ ಬಾವಿಯಾದ ಕಾರಣ ಅಪಾಯಕ್ಕೂ ಆಹ್ವಾನ ನೀಡುತ್ತಿದೆ. ಹೀಗಿದ್ದರೂ ಬಾವಿಯನ್ನು ದುರಸ್ತಿಗೊಳಿಸುವ ಇಲ್ಲವೇ ಮುಚ್ಚುವ ಕೆಲಸ ಮಾಡಿಲ್ಲ. ಅಲ್ಲದೆ ಶೌಚಾಲಯದ ಮೇಲು ಹೊದಿಕೆ ಕೂಡ ಶಿಥಿಲಗೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.