Advertisement

ಆದಿವಾಸಿಗಳು ದೇಶದ ವೈವಿಧ್ಯತೆಯ ಪ್ರತೀಕ: ಚೌಧರಿ

01:42 PM Dec 22, 2019 | Naveen |

ಹೊಸನಗರ: ತಮ್ಮದೇ ವಿಶಿಷ್ಟ ಬದುಕು ಮತ್ತು ಆಚರಣೆಯನ್ನು ಹೊಂದಿರುವ ಆದಿವಾಸಿಗಳು ಭಾರತದ ವೈವಿಧ್ಯತೆಯ ಪ್ರತೀಕ ಎಂದು ತ್ರಿಪುರಾದ ಮಾಜಿ ಸಂಸದ ಜೀತೇಂದ್ರ ಚೌಧರಿ ಅಬಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ವಿದ್ಯಾಸಂಘ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಆದಿವಾಸಿಗಳ ಸಮ್ಮೇಳನ ಮತ್ತು ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆದಿವಾಸಿಗಳು ತಮ್ಮದೇ ಭಾಷೆ, ಬದುಕು ಕಟ್ಟಿಕೊಂಡಿದ್ದು ಅದು ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಆದಿವಾಸಿಗಳು ಸಮಾಜಮುಖೀ ಚಿಂತನೆ ಮಾಡಬೇಕು. ದುಶ್ಚಟಗಳಿಗೆ ದಾಸರಾಗದೆ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕು. ಸರ್ಕಾರಗಳು ಕೂಡ ಆದಿವಾಸಿಗಳ ಬಗ್ಗೆ ವಿಶೇಷ ಗಮನ ನೀಡಬೇಕು. ತಲೆ ತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಅವರ ನೆಲೆಗಳನ್ನು ಅವರದ್ದೇ ಆಗುವಂತೆ ಮಾಡಬೇಕು. ಅನಾವಶ್ಯಕ ಕಿರುಕುಳ,
ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಪ್ರಕೃತಿಯ ಸಂಪನ್ಮೂಲಗಳನ್ನು ಸದ್ಬಳಕೆಗಾಗಿ ಸಮಾನವಾಗಿ ಹಂಚಿಕೊಂಡರೆ ಯಾವ ವಿವಾದವೂ ಇರುವುದಿಲ್ಲ. ವಿವಾದ ಬಂದಲ್ಲಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಆದಿವಾಸಿಗಳಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಅರಣ್ಯ ಹಕ್ಕು ಕಾನೂನು ಜಾರಿಗೆ ಬಂದಿದೆ. ಆದರೆ ಎಡರಂಗದ ಪಕ್ಷಗಳು ಹೊರತುಪಡಿಸಿ ಇನ್ಯಾವುದೇ ಸರ್ಕಾರಗಳು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿವೆ ಎಂದರು.

ಶಿಕ್ಷಣವೇ ಶಕ್ತಿ: ಸಮ್ಮೇಳನಕ್ಕೆ ಚಾಲನೆ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ ಕಲಾವಿದೆ ಯಲ್ಲಪ್ಪ ನೊಣಬೂರು, ಆದಿವಾಸಿಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಧ್ಯೋತಕ. ಆದಿವಾಸಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಸೂಕ್ತ ಶಿಕ್ಷಣ ದೊರೆತಾಗ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.

ನಮ್ಮ ದೇಶದಲ್ಲಿ 500ಕ್ಕೂ ಹೆಚ್ಚು ವಿವಿಧ ಆದಿವಾಸಿ ಸಮುದಾಯಗಳಿವೆ. ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಸಮುದಾಯವಿದೆ. ಮೊದಲು ಕೀಳರಿಮೆ ತೊಡೆದು ಹಾಕಬೇಕು. ನಮ್ಮ ಆಚರಣೆಯನ್ನು, ಸಾಂಸ್ಕೃತಿಕ ಹಿನ್ನೆಲೆಯನ್ನು ಇತರ ಸಮುದಾಯದವರು ಅನುಕರಿಸುತ್ತಾರೆ. ಅದೇ ರೀತಿ ನಮ್ಮ ಬದುಕು ಕೂಡ ಇತರರಿಗೆ ಮಾದರಿಯಾಗಬೇಕು. ಆನಿಟ್ಟಿನಲ್ಲಿ ಆದಿವಾಸಿಗಳು ಬದುಕನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು.

Advertisement

ಹಿರಿಯ ರಂಗಕರ್ಮಿ ಆರ್‌. ಪ್ರಸನ್ನ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದಿವಾಸಿಗಳ ಬದುಕು ಮತ್ತು ಸಂಕಷ್ಟಗಳನ್ನು ಒಳಗೊಳಿಸಿ ಆಂದೋಲನದ ಮಾದರಿಯಲ್ಲಿ ಸಂಘಟಿಸಿರುವುದು ಸಮ್ಮೇಳನದಲ್ಲಿ ಕಂಡುಬರುತ್ತದೆ. ಇಂತಹ ಆಲೋಚನೆ ಮಹತ್ವದ್ದಾಗಿದೆ ಮತ್ತು ಭವಿಷ್ಯತ್ತಿನಲ್ಲಿ ಆದಿವಾಸಿಗಳ ಹಕ್ಕು ಪಡೆಯಲು ನೆರವಾಗುತ್ತದೆ ಎಂದರು.

ಸಮ್ಮೇಳನದ ಎನ್‌. ಹುಚ್ಚಪ್ಪ ಮಾಸ್ತರ್‌ ವೇದಿಕೆಯಲ್ಲಿ ಕರ್ನಾಟಕದ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ವೈ.ಕೆ. ಗಣೇಶ, ಡಾ| ಕೃಷ್ಣಪ್ಪ ಕೊಂಚಾಡಿ, ಜೆ.ಆರ್‌.ಪ್ರೇಮಾ, ಪ್ರೇಮಾನಂದ ವೆಳಿಪಾ, ವಿ.ಬಸವರಾಜು, ಮಂಜುನಾಥ ಕಪದೂರು, ಗುರುಶಾಂತ ಇದ್ದರು. ಮಂಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಡ ನಿರೂಪಿಸಿದರು. ವೈ.ಕೆ. ಗಣೇಶ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next