ಹೊಸನಗರ: ಪಟ್ಟಣದಲ್ಲಿರುವ ತಾಲೂಕು ಕೇಂದ್ರ ಗ್ರಂಥಾಲಯದ ಕಟ್ಟಡವೂ ಸದೃಢವಾಗಿದೆ. ಓದಲು ಪುಸ್ತಕಗಳ ಕೊರತೆಯೂ ಇಲ್ಲ. ಆದರೆ ಕಳೆದ 14 ತಿಂಗಳಿಂದ ಅ ಧಿಕೃತ ಗ್ರಂಥಫಾಲಕರೇ ಇಲ್ಲ. ಇದು ಹೊಸನಗರದ ಕೇಂದ್ರ ಗ್ರಂಥಾಲಯದ ಸ್ಥಿತಿ. ಗ್ರಂಥಾಲಯದಲ್ಲಿ ಸರಿಸುಮಾರು 40 ಸಾವಿರ ಪುಸ್ತಕಗಳಿವೆ.
ಅಲ್ಲದೆ ಬಹುತೇಕ ಎಲ್ಲಾ ನ್ಯೂಸ್ ಪೇಪರ್ ಇಲ್ಲಿ ಓದಲು ದೊರೆಯುತ್ತದೆ. ಆದರೆ ಅಧಿಕೃತ ಗ್ರಂಥಪಾಲಕರ ವಿಚಾರದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಅಶೋಕ ಗುಳೇದ್ ನಿವೃತ್ತಿ ಬಳಿಕ ಹರೀಶ್ ಎಂಬುವವರಿಗೆ ಇನ್‌ಚಾರ್ಜ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಈವರೆಗೆ ಗ್ರಂಥಾಲಯಕ್ಕೆ ಅವರು ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಪ್ರಶಂಸೆಗೆ ಪಾತ್ರವಾದ ಅಶೋಕ ಗುಳೇದ್ ಕಾಳಜಿ: ಅಶೋಕ ಗುಳೇದ್ ಹೊಸನಗರದ ಗ್ರಂಥಪಾಲಕರಾಗಿ ಸಾಕಷ್ಟು ಸಮಯದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವರು. 14 ತಿಂಗಳ ಹಿಂದೆ ಅಶೋಕ ಗುಳೇದ್ ನಿವೃತ್ತಿ ಹೊಂದಿದ್ದಾರೆ. ಆದರೆ ನೂತನ ಗ್ರಂಥಪಾಲಕರು ನೇಮಕವಾಗದ ಕಾರಣ ಅಶೋಕ ಗುಳೇದ್ ಸ್ವಯಂ ಕಾಳಜಿಯಿಂದ ಸಂಬಳ ರಹಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಸುವ್ಯವಸ್ಥಿತ ಕಟ್ಟಡ: 2017ರಲ್ಲಿ ಅಂದಾಜು 35 ಲಕ್ಷ ವೆಚ್ಚದಲ್ಲಿ ಸದೃಢ ಕಟ್ಟಡ ನಿರ್ಮಾಣಗೊಂಡಿದೆ. ಇಲ್ಲು ಕೂಡ ಅಶೋಕ ಗುಳೇದ್ ಶ್ರಮ ಕಂಡುಬರುತ್ತದೆ. ನ್ಯೂಸ್ ಪೇಪರ್, ನಿಯತಕಾಲಿಕೆಗಳು ಮತ್ತು 40 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ. ಗ್ರಂಥಾಲಯವನ್ನು ಕೂಡ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ನ್ಯೂಸ್ ಪೇಪರ್ ಮತ್ತು ನಿಯತಕಾಲಿಕೆಗಳ ಖರೀದಿಗೆ ಅನುದಾನ ಕೊರತೆಯಾಗಿಲ್ಲ.
29 ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿಲ್ಲ: ತಾಲೂಕಿನಲ್ಲಿ 29 ಕಿರು ಗ್ರಂಥಾಲಯಗಳಿವೆ. ಸುಮಾರು 3 ರಿಂದ 4 ಸಾವಿರದ ತನಕ ಪುಸ್ತಕಗಳ ದಾಸ್ತಾನು ಕೂಡ ಇದೆ. ಆದರೆ ಸ್ವಂತ ಕಟ್ಟಡಗಳು ಮಾತ್ರ ಇಲ್ಲ. 2019, ಅ.1 ರಂದು ತಾಲೂಕಿನ 29 ಗ್ರಂಥಾಲಯಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಗೊಂಡಿವೆ. ಬಹುತೇಕ ಗ್ರಂಥಾಲಯಗಳು ಪಂಚಾಯತ್ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ.