Advertisement

Hosanagar: ನಗರ ಭಾಗದಲ್ಲಿ ಸರಣಿ ಕಳ್ಳತನ ಪ್ರಕರಣ;ಆತಂಕದಲ್ಲಿ ಜನರು;ಪೊಲೀಸರಿಂದ ಜಾಗೃತಿ

02:56 PM Aug 19, 2024 | Poornashri K |

ಹೊಸನಗರ: ತಾಲೂಕಿನ ನಗರ ಭಾಗದಲ್ಲಿ ಸರಣಿ ಕಳ್ಳತನ ಯತ್ನ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಜನರಿಗೆ ಆತಂಕ ತರಿಸಿದರೆ ಪೊಲೀಸರಿಗೆ ತಲೆನೋವು ತರಿಸಿದೆ.

Advertisement

ಕಳೆದ ಆ.14 ರಂದು ಕಾನುಗೋಡು ರಾಮಕೃಷ್ಣ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು ರೂ.1,36,500-00 ಮೌಲ್ಯದ ಚಿನ್ನಾಭರಣ, ರೂ.4000 ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿದೆ.

ಇದೇ ದಿನ ಮಾಸ್ತಿಕಟ್ಟೆ ಸಮೀಪದ ಕಿಲಗಾರು ವಾಸಿ ಸುಜಯ ಗೋಪಾಲ, ಸುಜಯ ಚಂದ್ರಪ್ಪಗೌಡ ಎಂಬುವವರ ಮನೆಯಲ್ಲೂ ಕೂಡ ಕಳ್ಳತನಕ್ಕೆ ಯತ್ನಿಸಿದ ಘಟನೆಗಳು‌ ನಡೆದಿವೆ.

ಪುಟ್ಟಕ್ಕನ ಮನೆ:

ನಗರ ಮಾಸ್ತಿಕಟ್ಟೆ ಮಾರ್ಗದ ಮುಂಡಳ್ಳಿ ಸಮೀಪದ ಪುಟ್ಟಕ್ಕನ ಮನೆಯಲ್ಲೂ ಕಳ್ಳತನ ಮಾಡಿದ ಘಟನೆ ಭಾನುವಾರ ನಡೆದಿದೆ. ಬಂಗಾರದ ಓಲೆ, ಮತ್ತು ಉಂಗುರ ಮತ್ತು‌ ನಗದು ಕಳ್ಳತನ ಮಾಡಲಾಗಿದೆ. ಇದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಪುಟ್ಟಕ್ಕನ ಮನೆ ಗೇಟ್ ಮುಂಭಾಗ ಕದ್ದ ಮಾಲನ್ನು ವಾಪಾಸು ಇಟ್ಟು ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಹಾಡು ಹಗಲೇ ಘಟನೆ:

ಕಿಲಗಾರು, ಕಾನುಗೋಡು, ಮುಂಡಳ್ಳಿ ಸೇರಿದಂತೆ ಎಲ್ಲಾ ಪ್ರಕರಣಗಳು ಹಾಡುಹಗಲೇ‌ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಕೂಲಿಕಾರ್ಮಿಕರ ಮನೆಯನ್ನೇ ಕಳ್ಳತನಕ್ಕೆ ಕೇಂದ್ರೀಕರಿಸಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನದ ಯತ್ನ ಮಾಡಲಾಗುತ್ತಿದ್ದು ಪೊಲೀಸರಿಗೆ ತಲೆನೋವು ತರಿಸಿದೆ.

ಸಿಸಿ ಟಿವಿಗಳು ಇಲ್ಲ:

ಕಳ್ಳತನ ಪ್ರಕರಣ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಪೊಲೀಸರಿಂದ ನಡೆದರು ಕೂಡ ಆಯ್ದ ಜಾಗಗಗಳಲ್ಲಿ‌ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಹಿನ್ನಡೆಯಾಗಿದೆ. ಪೊಲೀಸರು ಕರಪತ್ರ ಹಂಚಿ ಜಾಗೃತಿ ಮೂಡಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ನಗರ ಭಾಗದಲ್ಲಿ ಒಂಟಿಮನೆಗಳು ಹೆಚ್ಚು. ಅಲ್ಲದೇ ಕೂಲಿಕಾರ್ಮಿಕರು ಕೂಡ ಹೆಚ್ಚು, ಬೆಳಿಗ್ಗೆ ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ಹೋದರೆ ಬರುವುದು ಸಂಜೆಯೇ. ಹೀಗಾಗಿ ಈ ಸಂದರ್ಭ ನೋಡಿಕೊಂಡು ಕಳ್ಳತನ ಯತ್ನ ನಡೆಯುತ್ತಿದೆ.

ಕಳ್ಳತನದ ಯತ್ನಗಳಿಂದ ಬಚಾವಾಗಲು, ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯ. ಭದ್ರತೆ ಇಲ್ಲದ ಮನೆಗಳಲ್ಲಿ ಚಿನ್ನಾಭರಣ, ನಗದು ಇಟ್ಟು ಹೋಗುವ ಬಗ್ಗೆ ನಿಗಾ ವಹಿಸಬೇಕು. ಎರಡು ಮೂರು ದಿನಗಳ ಕಾಲ ಮನೆ ಬಿಟ್ಟು ಇರುವ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಪೊಲೀಸರಿಗೆ ನೀಡುವುದು ಉತ್ತಮ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಶಿವಾನಂದ ಕೋಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಒಟ್ಟಾರೆ ನಗರ ಮಾಸ್ತಿಕಟ್ಟೆ ಭಾಗದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಕಳ್ಳತನ ಮತ್ತು ಯತ್ನ ಪ್ರಕರಣಗಳು ಪೊಲೀಸರ‌ ನಿದ್ದೆಗೆಡಿಸಿರುವುದು ಮಾತ್ರ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next