Advertisement

ರೈತರ ಹಿತ ಕಾಪಾಡಲು ಕೇಂದ್ರ ಬದ್ಧ

05:18 PM Feb 28, 2020 | Naveen |

ಹೊಸಕೋಟೆ: ಕೇಂದ್ರ ಸರಕಾರ ರೈತರ ಹಿತ ಕಾಪಾಡಲು ಬದ್ಧವಾಗಿದ್ದು ಜಾರಿಗೊಳಿಸಿರುವ ವಿಶಿಷ್ಟ ಯೋಜನೆಗಳಿಂದ ರಾಷ್ಟ್ರವು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ಸಂಸದ ಬಿ.ಎನ್‌. ಬಚ್ಚೇಗೌಡ ಹೇಳಿದರು.

Advertisement

ಬೆಂಗಳೂರು ಹಾಲು ಒಕ್ಕೂಟದ ಹೊಸಕೋಟೆ ಡೇರಿ ಆವರಣದಲ್ಲಿ ನೂತನ ಶಿಬಿರ ಕಚೇರಿ, ಉಪಾಹಾರ ಗೃಹ, ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ವಿಶ್ವದಲ್ಲೇ ನಂ.1: ಕೃಷಿ ವಲಯಕ್ಕೆ 1 ಲಕ್ಷ 63 ಸಾವಿರ ಕೋಟಿ ರೂ.ಗಳನ್ನು, ಗ್ರಾಮೀಣಾ ಭಿವೃದ್ಧಿಗೆ 1 ಲಕ್ಷ 20 ಸಾವಿರ ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದು ಇದರಿಂದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡು ವಲ್ಲಿ ವಿಶ್ವದಲ್ಲಿಯೇ ಭಾರತ ಪ್ರಥಮ ಸ್ಥಾನ ಪಡೆದುಕೊಂಡಿದ್ದು ರೈತರು ಸಹ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಬಯಲುಸೀಮೆ ಪ್ರದೇಶಕ್ಕೆ ಈಗಾಗಲೇ ಎಚ್‌ಎನ್‌ ವ್ಯಾಲಿ ಯೋಜನೆಯಡಿ ನೀರು ಹರಿದುಬರುತ್ತಿದ್ದು ಎತ್ತಿನಹೊಳೆ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ದೇಶದಲ್ಲಿ 1.50 ಕೋಟಿ ಜನರು ಮೀನುಗಾರಿಕೆಯಲ್ಲಿ ತೊಡಗಿದ್ದು, ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿರುವ 70 ಕೆರೆಗಳನ್ನು ಸ್ವತ್ಛಗೊಳಿಸಿ ಅವುಗಳಲ್ಲಿ ಮೀನುಗಾರಿಕೆ ಕೈಗೊಳ್ಳಲು ಅವಕಾಶ ಮಾಡಿ ಕೊಟ್ಟಲ್ಲಿ ಸ್ವಉದ್ಯೋಗಕ್ಕೆ ಪ್ರೋತ್ಸಾಹಿಸಿ ದಂತಾಗಲಿದೆ. ಚೀನಾದಲ್ಲಿ ಪ್ರಸ್ತುತ ತಲೆದೋರಿರುವ ಕೊರೊನಾ ವೈರಸ್‌ ಜ್ವರದಿಂದಾಗಿ ರೇಷ್ಮೆ ಆಮದು ಸಂಪೂರ್ಣ ವಾಗಿ ನಿಲುಗಡೆಯಾಗಿರುವ ಕಾರಣ ಸ್ಥಳೀಯ ಉತ್ಪಾದಕರು ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿದೆ.

ವಿದೇಶಗಳಿಂದ ಹಾಲು ಉತ್ಪನ್ನಗಳ ಆಮದು ಮಾಡಿಕೊಳ್ಳುವ ಬಗ್ಗೆ ಯಾವುದೇ ಒಪ್ಪಂದ ಗಳಿಗೆ ಸಹಿ ಹಾಕದ ಕಾರಣದಿಂದಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಲ್ಲಿ ಉಂಟಾಗಿದ್ದ ಭೀತಿ ನಿವಾರಣೆಗೊಂಡಿದೆ.

ಒಕ್ಕೂಟವು ರೈತರು ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಕೃಷಿ ಮೇಳದಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ ಯೋಜನೆ ರೂಪಿಸಲು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಪ್ರಮುಖ ಉದ್ಯೋಗ: ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ ರೇಷ್ಮೆ ಮತ್ತು ಹೈನುಗಾರಿಕೆ ಗ್ರಾಮೀಣ ಪ್ರದೇಶದ ರೈತರ ಪ್ರಮುಖ ಉದ್ಯೋಗವಾಗಿದ್ದು ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಪ್ರಸ್ತುತ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಶಾಶ್ವತ ನೀರಾವರಿ ಯೋಜನೆಗಾಗಿ ಸರಕಾರಕ್ಕೆ ಮನವಿ ಮಾಡಲಾಗಿದೆ. ಇದರೊಂದಿಗೆ ತಾಲೂಕಿನಲ್ಲಿ ಹೂ, ತರಕಾರಿ, ಹಣ್ಣು ಬೆಳೆಗಾರರಿಗೂಸಹ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ ಎಂದರು.

Advertisement

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಒಕ್ಕೂಟದ ವ್ಯಾಪ್ತಿಯಲ್ಲಿ 2181 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿದಿನ 16.48 ಲಕ್ಷ ಲೀ.ಗಳಷ್ಟು ಹಾಲು ಸಂಗ್ರಹಗೊಳ್ಳುತ್ತಿದೆ. ಕನಕಪುರದಲ್ಲಿ 550 ಕೋಟಿ ರೂ.ಗಳ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸ್ವಯಂಚಾಲಿತ ಹಾಲು ಸಂಸ್ಕರಣೆ, ಹಾಲು ಉತ್ಪನ್ನಗಳ ತಯಾರಿಕಾ ಘಟಕವನ್ನು ನಿರ್ಮಿಸಿದ್ದು ದೇಶದಲ್ಲಿಯೇ ಪ್ರಥಮದ್ದಾಗಿದೆ ಎಂದು ತಿಳಿಸಿದರು.

5 ವರ್ಷದೊಳಗೆ ಕಾಮಗಾರಿ ಪೂರ್ಣ: ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್‌ ಮಾತನಾಡಿ 2010ರಲ್ಲಿ 47
ಕೋಟಿ ರೂ.ಗಳ ವೆಚ್ಚದಲ್ಲಿ ಡೇರಿ ಪ್ರಾರಂಭಿಸಿದ್ದು ಪ್ರತಿದಿನ 2 ಲಕ್ಷ ಲೀ.ಗಳನ್ನು ಸಂಸ್ಕರಿಸಿ ಪ್ಯಾಕ್‌ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸೂಕ್ತ ಜಾಗ ನೀಡಿದಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಪಶು ಆಹಾರ ಉತ್ಪಾದನಾ ಘಟಕವನ್ನು ನಿರ್ಮಿಸಲಾಗುವುದು. ಪ್ರಸ್ತುತ ಡೇರಿಯ ಆವರಣದಲ್ಲಿ ಅಂದಾಜು 5 ಕೋಟಿ ರೂ.ಗಳ ವೆಚ್ಚದಲ್ಲಿ ಶಿಬಿರ ಕಚೇರಿ, ನೌಕರರಿಗೆ ಉಪಹಾರಗೃಹ, ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು 1 ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದರು.

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸಿ.ಆನಂದಕುಮಾರ್‌, ಎಂ. ಮಂಜುನಾಥ್‌, ಬಿ.ಜಿ.ಆಂಜಿನಪ್ಪ, ಕೆ.ಎಸ್‌.ಕೇಶವಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಡಾ: ಜಿ.ಟಿ. ಗೋಪಾಲ್‌, ಡಾ: ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next