Advertisement

ಜೇಬಿಗೆ ತಕ್ಕ “ಶಾಸ್ತ್ರಿ’!

10:13 AM Jan 07, 2020 | mahesh |

ಹೊಸಪೇಟೆ ಹಂಪೆಯಿಂದ 13 ಕಿ.ಮೀ ದೂರದಲ್ಲಿದೆ. ವಿಶ್ವ ಪರಂಪರೆಯ ತಾಣ “ಹಂಪೆ’ಗೆ ಹೋಗುವ ಪ್ರವಾಸಿಗರು ಹೊಸಪೇಟೆಗೆ ತಪ್ಪದೇ ಭೇಟಿ ಕೊಡುತ್ತಾರೆ. ಅಂಥಹವರಿಗೆ ಬೆಸ್ಟ್‌ ಹೋಟೆಲ್‌ “ಶಾಸ್ತ್ರೀ’. ಹೊಸಪೇಟೆ ನಗರದ ಮೇನ್‌ ಬಜಾರ್‌, ನಗರೇಶ್ವರ ಗುಡಿ ಎದುರು ಈ ಹೋಟೆಲ್‌ ಇದೆ.

Advertisement

ಮಲ್ಲಿಗೆಯಂತೆ ಮೃದುವಾದ ತಟ್ಟೆ ಇಡ್ಲಿ, ಪಡ್ಡು, ಹೊಸಪೇಟೆ ಬೆಣ್ಣೆ ದೋಸೆ ಗ್ರಾಹಕರ ಬಾಯಲ್ಲಿ ನೀರೂರಿಸುತ್ತೆ. ಹಳ್ಳಿ ಶೆಟ್ರಾ ಕೊಟ್ರೇಶಪ್ಪ ಮತ್ತು ಹಳ್ಳಿ ಶೆಟ್ರಾ ಮಂಜುನಾಥ್‌ ಶಾಸ್ತ್ರೀ ಹೋಟೆಲ್‌ನ ಮಾಲೀಕರು. 1998ರಲ್ಲಿ ಕೆಲಸ ಅರಸುತ್ತಾ ತಂದೆ -ತಾಯಿ, ಅಕ್ಕನೊಂದಿಗೆ ಕೊಟ್ಟೂರಿನಿಂದ ಹೊಸಪೇಟೆಗೆ ಕೊಟ್ರೇಶ್‌ ಹಾಗೂ ಮಂಜುನಾಥ್‌, ಸೋದರರು ಬಂದರು.

ಮಂಜುನಾಥ್‌, ಬಾವಿಕಟ್ಟೆ ಬಸವಣ್ಣನವರ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದರು. ಸೋದರ ಕೊಟ್ರೇಶ್‌, ಈ ಹಿಂದೆ ಬೆಂಗಳೂರಿನ ಪೀಣ್ಯಾ 2ನೇ ಹಂತದಲ್ಲಿದ್ದ ಗುರು ಹೋಟೆಲ್‌ ಮತ್ತು ಮೈಸೂರಿನ ರಾಘವೇಂದ್ರ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಅವರು, ಮೆಸ್‌ ಕೆಫೆ ಹೋಟೆಲ್‌ಗೆ ಸೇರಿದರು. ಇಲ್ಲಿ ಕೆಲವು ವರ್ಷ ಕೆಲಸ ಮಾಡಿದ ನಂತರ, ಸ್ವಂತಕ್ಕೆ ಒಂದು ಬಂಡಿ(ತಳ್ಳುವ ಗಾಡಿ) ಇಟ್ಟುಕೊಂಡು ದೀಪಾಯನ ಶಾಲೆ ಮುಂಭಾಗ ಹೋಟೆಲ್‌ ಪ್ರಾರಂಭಿಸಿದ್ದರು. ತಾಯಿ ಸಿದ್ಧಮ್ಮ, ತಂದೆ ವೀರಣ್ಣ, ತಮ್ಮ ಮಂಜುನಾಥ್‌, ಸಾಥ್‌ ನೀಡಿದ್ದರು. ಮೂರು ವರ್ಷಗಳ ನಂತರ ಸರ್ಕಾರಿ ಆಸ್ಪತ್ರೆ ಎದುರು ಪುಟ್ಟದಾಗಿ ಬಾಡಿಗೆ ಮಳಿಗೆ ಪಡೆದು 5 ವರ್ಷ ಹೋಟೆಲ್‌ ನಡೆಸಿದ್ದರು. ಈಗ ಮೇನ್‌ ಬಜಾರ್‌ನಲ್ಲಿ 8 ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದಾರೆ. ಕೆಲಸ ಹುಡುಕಿಕೊಂಡು ಹೊಸಪೇಟೆಗೆ ಬಂದ ಕೊಟ್ರೇಶ್‌, ಈಗ 8 ಮಂದಿಗೆ ಕೆಲಸ ಕೊಟ್ಟಿದ್ದಾರೆ.

“ಶಾಸ್ತ್ರೀ’ ಒಬ್ಬ ಪ್ರಾಧ್ಯಾಪಕರ ಹೆಸರು
ಪ್ರಾರಂಭದಲ್ಲಿ ತಳ್ಳುವ ಗಾಡಿಯಲ್ಲಿ ಹೋಟೆಲ್‌ ನಡೆಸುತ್ತಿದ್ದ ಕೊಟ್ರೇಶ್‌ಗೆ, ಕೆಲ ಶ್ರೀಮಂತರು ಇಲ್ಲಿ ಹೋಟೆಲ್‌ ಇಡದಂತೆ ಕಿರಿಕಿರಿ ಮಾಡುತ್ತಿದ್ದರು. ಸಾಕಷ್ಟು ಬಾರಿ ಪೊಲೀಸ್‌ ಠಾಣೆಗೂ ದೂರು ನೀಡಿದ್ದರು. ಇವುಗಳಿಂದ ಬೇಸತ್ತಿದ್ದ ಕೊಟ್ರೇಶ್‌ಗೆ ಸ್ಫೂರ್ತಿ ಹಾಗೂ ಧೈರ್ಯ ತುಂಬಿದ್ದು ವಿಜಯನಗರ ಕಾಲೇಜಿನ ಶಾಸ್ತ್ರೀ ಲೆಕ್ಚರರ್‌. ಒಮ್ಮೆ ಖಾಸಗಿ ಶಾಲೆಯ ಡೊನೆಷನ್‌ ವಿರುದ್ಧ ಏಕಾಂಗಿ ಹೋರಾಟ ಮಾಡುತ್ತಿದ್ದ ಶಾಸ್ತ್ರೀಯವರ ಮಾತುಗಳು, ಅಲ್ಲೇ ಸ್ವಲ್ಪ ದೂರದಲ್ಲೇ ಬಂಡಿಯಲ್ಲಿ ಹೋಟೆಲ್‌ ವ್ಯಾಪಾರ ಮಾಡುತ್ತಿದ್ದ ಕೊಟ್ರೇಶ್‌ ಕಿವಿಗೆ ಬಿತ್ತು. ಇದರಿಂದ ಪ್ರೇರಣೆ ಪಡೆದ ಕೊಟ್ರೇಶ್‌, ನಂತರ ಕಿರಿಕಿರಿ ಮಾಡುತ್ತಿದ್ದವರ ವಿರುದ್ಧ ಪ್ರತಿಭಟಿಸಲು ಶುರು ಮಾಡಿದರು. ತನಗೆ ಪ್ರೇರಣೆ ನೀಡಿದ ಲೆಕ್ಚರರ್‌ ಶಾಸಿŒಯವರ ಹೆಸರನ್ನೇ ಕೊಟ್ರೇಶ್‌ ಹೋಟೆಲಿಗೂ ಇಟ್ಟಿದ್ದಾರೆ. ಒಮ್ಮೆ ಇದೇ ಶಾಸ್ತ್ರೀಯವರು ಕೊಟ್ರೇಶ್‌ ಹೋಟೆಲ್‌ಗೆ ಬಂದಿದ್ದರು. ಅಲ್ಲಿವರೆಗೂ ಶಾಸ್ತ್ರೀಯವರ ಮಾತನ್ನಷ್ಟೇ ಕೇಳಿಸಿಕೊಂಡಿದ್ದ ಕೊಟ್ರೇಶ್‌ಗೆ ಅವರನ್ನು ನೋಡುವ ಭಾಗ್ಯವೂ ಸಿಕ್ಕಿತ್ತು. ಹಿಂದೆ ನಡೆದ ಇತಿಹಾಸವನ್ನು ಅವರಿಗೆ ಹೇಳಿ ಖುಷಿ ಪಟ್ಟರು ಕೊಟ್ರೇಶ್‌.

ತಿಂಡಿ ಜೊತೆ ವಚನಗಳನ್ನೂ ಓದಿ:
ಹೋಟೆಲ್‌ನ ಗೋಡೆ ಮೇಲೆ ನಾಡಿನ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಚಿತ್ರ ನಟರ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ ಭಾವಚಿತ್ರ ಹಾಕಿರುವುದರ ಜೊತೆಗೆ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಶರಣರ ವಚನಗಳನ್ನೂ ಬರೆಯಿಸಿದ್ದಾರೆ ಕೊಟ್ರೇಶ್‌. ಗ್ರಾಹಕರ ಹಸಿವು ನೀಗಿಸುವುದರ ಜೊತೆಗೆ ಜ್ಞಾನವನ್ನೂ ನೀಡಬೇಕೆಂಬುದು ಅವರ ಆಸೆ.

Advertisement

ಹೆಚ್ಚು ಇಷ್ಟಪಡುವ ತಿಂಡಿ:
ತಟ್ಟೆ ಇಡ್ಲಿ, ಹೊಸಪೇಟೆ ಬೆಣ್ಣೆ ದೋಸೆ, ಪಡ್ಡು(ಗುಂಡು ಪೊಂಗಲ) ಹೆಚ್ಚು ಇಷ್ಟ ಪಡುವ ತಿಂಡಿ. ಕೊಟ್ಟೂರು ಸುತ್ತಮುತ್ತಲ ರೈತರಿಂದ ಖರೀದಿಸಿದ ಬೆಣ್ಣೆಯಿಂದ ಮಾಡುವ “ಹೊಸಪೇಟೆ ಬೆಣ್ಣೆ ದೊಸೆ’ ದಾವಣಗೆರೆ ದೋಸೆಯನ್ನೇ ಮರೆಸುತ್ತೆ. ಮೃದುವಾದ ಮಲ್ಲಿಗೆ ಹೂವಿನಂತಹ ತಟ್ಟೆ ಇಡ್ಲಿ ಮತ್ತು ಪಡ್ಡು ಅನ್ನು ಕೆಂಪು ಚಟ್ನಿ ಜೊತೆ ತಿಂದರೆ ಬಾಯಲ್ಲಿ ನೀರು ಬರಿಸದೇ ಇರಲ್ಲ.

ಬೆಳಗ್ಗಿನ ತಿಂಡಿ:
ತಟ್ಟೆ ಇಡ್ಲಿ(2ಕ್ಕೆ 25 ರೂ.), ವಡೆ (15 ರೂ.), ಪೂರಿ(ನಾಲ್ಕಕ್ಕೆ 30 ರೂ.), ಗುಂಡು ಪೊಂಗಲ (ಪಡ್ಡು)(10ಕ್ಕೆ 30 ರೂ.), ಹೊಸಪೇಟೆ ಬೆಣ್ಣೆ ಮಸಾಲೆ ದೋಸೆ (45 ರೂ.), ಸೆಟ್‌ ದೋಸೆ, ಮಸಾಲೆ ದೋಸೆ (40 ರೂ.), ರೈಸ್‌ಬಾತ್‌ (25 ರೂ.), ಮಂಡಕ್ಕಿ ವಗ್ಗರಣೆ (25 ರೂ.), ದೇಸಿ ಜಿಲೇಬಿ, ಬೂಂದಿ ಖಾರ, ಕರ್ಜಿಕಾಯಿ, ಬೂಂದಿ ಲಾಡು, ಕೊಟ್ಟೂರು ಮಸಾಲೆ ಮಿರ್ಚಿ, ಅಲಸಂದಿ ವಡೆ, ಬದನೆಕಾಯಿ ಬಜ್ಜಿ, ಮೆಣಸಿನಕಾಯಿ ಬಜ್ಜಿ (ದರ 5 ರೂ.) ಸಿಗುತ್ತದೆ.

ಹೋಟೆಲ್‌ ಸಮಯ:
ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಂಜೆ 5 ರಿಂದ ರಾತ್ರಿ 10 ಗಂಟೆವರೆಗೆ. ಭಾನುವಾರ ರಜೆ.

ಹೋಟೆಲ್‌ ವಿಳಾಸ:
ಶಾಸ್ತ್ರೀ ಹೋಟೆಲ್‌, ಮೇನ್‌ ಬಜಾರ್‌, ನಗರೇಶ್ವರ ಗುಡಿ ಎದುರು, ಹೊಸಪೇಟೆ ನಗರ.

– ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next