ಹೊಸದುರ್ಗ: ಸೇವೆ ಮತ್ತು ನಿಷ್ಠೆಗೆ ಮತ್ತೂಂದು ಹೆಸರೇ ಆಂಜನೇಯಸ್ವಾಮಿ. ಸ್ವಾಮಿ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ| ಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೆಕುಂದೂರು ಗ್ರಾಮದಲ್ಲಿನ ಶ್ರೀ ಮದಾಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರದ ವಾರ್ಷಿಕ ಮಹೋತ್ಸವದಲ್ಲಿ ಶ್ರೀಗಳು ಆರ್ಶೀವಚನ ನೀಡಿದರು. ಮಾನವನ ದುರಾಸೆ, ಸ್ವಾರ್ಥ ಬುದ್ಧಿಯಿಂದಾಗಿ, ಪ್ರಕೃತಿ ನಾಶವಾಗುತ್ತಿದೆ. ಇದರಿಂದ ಮಳೆಯೂ ಆಗುತ್ತಿಲ್ಲ. ಉತ್ತಮ ಬೆಳೆಯೂ ಸಿಗುತ್ತಿಲ್ಲ. ಇದು ಮನುಕುಲದ ಕಂಟಕಪ್ರಾಯವಾಗಿದೆ. ಮಳೆಯಿಲ್ಲದೇ ಜನರು ಕುಡಿಯುವ ನೀರಿನ ಹಾಹಾಕಾರಎದುರಿಸುತ್ತಿದ್ದಾರೆ.ಭಕ್ತರಿಗೆ ನೀರು ಕೊಡಲು ಸಾಧ್ಯವಾಗದ ಸ್ಥಿತಿ ಮಠ ಮಾನ್ಯಗಳಿಗೂ ಬಂದೊದಗಿದೆ. ತಾಲೂಕಿನಲ್ಲಿ ತೆಂಗು, ಅಡಿಕೆ ವಾಣಿಜ್ಯ ಬೆಳೆಗಳೂ ನೆಲ ಕಚ್ಚುತ್ತಿವೆ. ಮಾನವನ ದುರಾಸೆ ಹೀಗೆಯೇ ಮುಂದುವರೆದರೆ ಮುಂದಿನ ಪೀಳಿಗೆಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕ ಗುರುಪೀಠ ಹಾಗೂ ಆಂಜನೇಯಸ್ವಾಮಿಗೆ ಅವಿನಾಭಾವ ಸಂಬಂಧವಿದೆ. ಕನಕದಾಸರು ಮೋಹನ ತರಂಗಿಣಿ ಎಂಬ ಗ್ರಂಥವನ್ನು ಆಂಜನೇಯನ ಸನ್ನಿಧಿಯಾದ ಕದರಮಂಡಲಗಿಯಲ್ಲಿ ರಚನೆ ಮಾಡಿದ್ದಾರೆ. ಕಾಗಿನೆಲೆಯಲ್ಲಿ ಈಶ ಪದವಿಯ ಕಾಂತೇಶ, ಬ್ರಾಂತೇಶ ಎಂಬ ಆಂಜನೇಯಸ್ವಾಮಿ ದೇವಸ್ಥಾನಗಳಿರುವುದು ಇದಕ್ಕೆ ಸಾಕ್ಷಿ ಎಂದರು.
ಭಗೀರಥ ಪೀಠದ ಡಾ| ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ತನ್ನ ದುರಾಸೆಯ ಫಲವನ್ನು ಮಾನವನೇ ಉಣ್ಣುತ್ತಿದ್ದಾನೆ. ಶ್ರೀ ಮದಾಂಜನೇಯ ಸ್ವಾಮಿಯ ಆಜ್ಞೆಯಂತೆ ಮೂರು ಪೀಠದ ಸ್ವಾಮೀಜಿಗಳು ದೇವಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ಭಕ್ತರೆಲ್ಲರೂ ಒಗ್ಗಟ್ಟಾಗಿರಬೇಕೆಂಬುದು ಸ್ವಾಮಿಯ ಅಪೇಕ್ಷೆಯಾಗಿದೆ ಎಂದು ಹೇಳಿದರು.
ಪ್ರಧಾನ ಅರ್ಚಕರಾದ ಟಿ.ಎಸ್. ವರದರಾಜು, ಬಿ.ಕೆ. ಶ್ರೀನಿವಾದ ಅಯ್ಯಂಗಾರ್, ಸತ್ಯನಾರಾಯಣ, ಶಮಂತ್, ವೆಂಕಟೇಶ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.