Advertisement

ನಡೀಲಿಲ್ಲ ಟಗರುಕಾಳಗ

07:49 PM Nov 25, 2019 | Team Udayavani |

ಹೊಸದುರ್ಗ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಟಗರು ಕಾಳಗ ಆಯೋಜನೆಗೆ ತೆರಳುತ್ತಿದ್ದ ಜಿಲ್ಲಾ ಹಾಲುಮತ ಮಹಾಸಭಾದ 12 ಜನ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

Advertisement

ಕನಕ ಜಯಂತಿ ಅಂಗವಾಗಿ ಪಟ್ಟಣದಲ್ಲಿ ರಾಜ್ಯ ಮಟ್ಟದ ಟಗರು ಕಾಳಗ ಆಯೋಜಿಸಲು ಹಾಲುಮತ ಮಹಾಸಭಾ ಮುಂದಾಗಿತ್ತು. ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರಿಂದ ಟಗರು ಕಾಳಗ ನಡೆಸದಂತೆ ತಾಲೂಕು ಆಡಳಿತ ಕ್ರಮ ಕೈಗೊಂಡಿತ್ತು. ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ಬಿ.ಟಿ. ಜಗದೀಶ್‌ ನೇತೃತ್ವದಲ್ಲಿ ಭಾನುವಾರ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಕ್ರೀಡಾಂಗಣಕ್ಕೆ ತೆರಳುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ಪೊಲೀಸ್‌ ವಾಹನದಲ್ಲಿ ಕೂರಿಸಿದರು.

ನಂತರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ಬಿ.ಟಿ. ಜಗದೀಶ್‌, ಟಗರು ಕಾಳಗ ಕುರುಬ ಸಮಾಜದ ಸಾಂಸ್ಕೃತಿಕ ಕ್ರೀಡೆಯಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿ ಯಾಕೆ ಅನುಮತಿ ನೀಡಿಲ್ಲ ಎಂಬುದೇ ಆಶ್ಚರ್ಯ ಮೂಡಿಸಿದೆ. ರಾಜ್ಯದಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಕಂಬಳ, ಜಲ್ಲಿಕಟ್ಟು ಮುಂತಾದ ಕ್ರೀಡೆಗಳಲ್ಲಿ ಅಪಾಯ ಇದ್ದರೂ ಅನುಮತಿ ನೀಡಲಾಗುತ್ತಿದೆ.

ಟಗರು ಕಾಳಗದಲ್ಲಿ ಜನರಿಗೆ ಹಾಗೂ ಪ್ರಾಣಿಗಳಿಗೆ ಯಾವುದೇ ಅಪಾಯವಾಗುವುದಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ನೀಡದೇ ಇದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next