ಹೊಸದುರ್ಗ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಮಾನಸಿಕವಾಗಿ ದುರ್ಬಲರಾಗಿ ತಮಗರಿವಿಲ್ಲದಂತೆ ಕೆಟ್ಟ ದಾರಿಯಲ್ಲಿ ಸಾಗುತ್ತಾರೆ. ನಂತರ ಪಶ್ಚಾತ್ತಾಪ ಪಟ್ಟರೂ ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿರುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪ್ರಶಾಂತ ನಾಗಲಾಪುರ ಹೇಳಿದರು.
ತಾಲೂಕಿನ ಶ್ರೀರಾಂಪುರದ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಪರಸ್ಪರ ಆಕರ್ಷಣೆಗೆ ಒಳಗಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ದೇಶದ ಕಾನೂನಿನ ಪ್ರಕಾರ ತಪ್ಪು ಮಾಡಿದ ಮೇಲೆ ಕಾನೂನಿನ ಅರಿವಿಲ್ಲವೆಂದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಆದ್ದರಿಂದ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಲೇ ಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾದವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಉಚಿತವಾಗಿ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕಾನೂನು ಸೇವಾ ಸಮಿತಿ ಕೆಲಸ ಮಾಡಲಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಡಿ. ಪ್ರಶಾಂತ್ ಕುಮಾರ್ ಬಾಲಕಾರ್ಮಿಕರ ನಿಷೇಧ ಕಾಯ್ದೆ ಕುರಿತು ಮಾತನಾಡಿ, ಸರ್ಕಾರ ಮಕ್ಕಳಗೆ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಹಣದ ಆಸೆಗಾಗಿ ಕೆಲವರು ಮಕ್ಕಳನ್ನು ಕೆಲಸಕ್ಕೆ ದೂಡುತ್ತಿದ್ದಾರೆ. ಇದು ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗುರುಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ. ಗಂಗಾಧರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಿರಂಜನಮೂರ್ತಿ, ವಕೀಲರಾದ ಷಡಕ್ಷರಪ್ಪ, ಲಕ್ಷ್ಮೀನಾರಾಯಣ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್ ವಾಲ್ಮೀಕಿ, ಎಸ…ಡಿಎಂಸಿ ಅಧ್ಯಕ್ಷ ರೇವಣ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್, ರತ್ನಮ್ಮ, ಸರೋಜಮ್ಮ, ಪಿಡಿಒ ನಾಗರಾಜ್
ಮತ್ತಿತರರು ಭಾಗವಹಿಸಿದ್ದರು.