ಹೊಸದುರ್ಗ: ತಾಲೂಕಿನ ಕೆಲ್ಲೋಡು ಬಳಿ ವೇದಾವತಿ ನದಿಗೆ ನಿರ್ಮಿಸಲಾಗಿರುವ ಬ್ಯಾರೇಜ್ ಪಕ್ಕದಲ್ಲಿ ನೀರಿನ ಕೊರೆತದಿಂದ ನದಿಗೆ ಹೊಂದಿಕೊಂಡಿರುವ ದಿಣ್ಣೆ ಕುಸಿಯುತ್ತಿದೆ. ದಿಣ್ಣೆ ಕೊರೆಯದಂತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಲ್ಲೋಡು ಗ್ರಾಮದ ರೈತರು ಬ್ಯಾರೇಜ್ ಬಳಿ ಪ್ರತಿಭಟನೆ ನಡೆಸಿದರು.
ಕಳೆದ ಹಲವು ದಿನಗಳಿಂದ ವೇದಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ನೀರಿನ ಕೊರೆತದಿಂದ ವೇದಾವತಿ ನದಿ ದಿಣ್ಣೆಗಳು ಕುಸಿಯುತ್ತಿವೆ. ಅದರಲ್ಲೂ ಬ್ಯಾರೇಜ್ ಪಕ್ಕದಲ್ಲಿ ಬಹಳಷ್ಟು ಕೊರೆತ ಉಂಟಾಗಿದ್ದು ತಾತ್ಕಾಲಿಕವಾಗಿ ಮರಳಿನ ಚೀಲ ಹಾಕಿಯಾದರೂ ಸರಿಪಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಕಳೆದ ವಾರದ ಹಿಂದೆ ರಭಸವಾಗಿ ನದಿಯಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಬ್ಯಾರೇಜ್‌ಗೆ ಹೊಂದಿಕೊಂಡಿರುವ ಜಮೀನಿನ ಮಣ್ಣು ಕುಸಿಯಲಾರಂಭಿಸಿದೆ. ಪ್ರತಿ ದಿನ ದಿಣ್ಣೆ ಕುಸಿಯುತ್ತಿರವುದರಿಂದ ನದಿ ಪಾತ್ರದ ಜಮೀನುಗಳು ನಾಶವಾಗುತ್ತಿವೆ. ನದಿ ಪಾತ್ರದ ಪಕ್ಕದ ಜಮೀನಿನಲ್ಲಿದ್ದ ಹತ್ತಾರು ತೆಂಗಿನ ಮರಗಳನ್ನು ವೇದಾವತಿ ತನ್ನಒಡಲಿಗೆ ಸೇರಿಸಿಕೊಂಡಿದೆ. ಬ್ಯಾರೇಜ್ ಸರಿಪಡಿಸುವಂತೆ ಪಟ್ಟಣ ಪಂಚಾತ್, ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸಂಬಂಧಿಸಿದವರು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.
ಬ್ಯಾರೇಜ್ ಪಕ್ಕದ ದಿಣ್ಣೆ ಕುಸಿದಾಗ ಸ್ಥಳಕ್ಕೆ ಆಗಮಿಸಿದ್ದ ಸಂಸದರು ಹಾಗೂ ಶಾಸಕರು, ತುರ್ತಾಗಿ ಮರಳಿನ ಚೀಲಗಳನ್ನು ಹಾಕಿ ನೀರು ಹರಿಯುವ ಮಾರ್ಗವನ್ನು ಬದಲಿಸುವಂತೆ ಸೂಚಿಸಿದ್ದರು. ಇದನ್ನುಗಂಭೀರವಾಗಿ ಪರಿಗಣಿಸದ ಅ ಧಿಕಾರಿಗಳು, ರೈತರನ್ನು ಉದಾಸೀನದಿಂದ ಕಾಣುತ್ತಿದ್ದಾರೆ. ಬ್ಯಾರೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ. ತಾತ್ಕಾಲಿಕವಾಗಿ ಮರಳಿನ ಚೀಲಗಳನ್ನು ಹಾಕಿ ಬ್ಯಾರೇಜ್ ಸರಿಪಡಿಸದಿದ್ದರೆ ದಿಣ್ಣೆ ಕುಸಿದು ಜಮೀನುಗಳು ನಾಶವಾಗಲಿವೆ ಎಂದು ಜಮೀನುಗಳ ಮಾಲೀಕರಾದ ನಿಂಗಣ್ಣ, ಹನುಮಂತಪ್ಪ, ಅಂಜಿನಪ್ಪ, ನಾಗರಾಜ್ ಅಳಲು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ್, ರೈತರಾದ ಚಿಕ್ಕಣ್ಣ, ಸಿದ್ದಪ್ಪ ಜಗನ್ನಾಥ್ ಮತ್ತಿತರರು ಇದ್ದರು.