ಹೊಸದುರ್ಗ: ಶೈಕ್ಷಣಿಕ ಕಾರಣದಿಂದ ಲಿಂಗ ಅಸಮಾನತೆಯಲ್ಲಿ ಸುಧಾರಣೆ ಕಂಡು ಬಂದಿದೆ. ಆದಾಗ್ಯೂ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಪುರುಷ ಅಸಮಾನತೆ, ಶೋಷಣೆ ಇನ್ನೂ ಜೀವಂತವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಹೇಳಿದರು.
ಪಟ್ಟಣದ ಇಂದಿರಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ವತಿಯಿಂದ ಶನಿವಾರ ನಡೆದ ಮಹಿಳೆಯರ ಸ್ಥಿತಿ ಗತಿ ಕುರಿತು ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುರುಷರಷ್ಟೇ ಮಹಿಳೆಗೂ ಸಮಾನ ಅವಕಾಶ, ಸ್ಥಾನಮಾನ ಹಾಗೂ ಸಮಾನತೆಯನ್ನು ನೀಡಬೇಕು, ಪುರಾತನ ಕಾಲದಲ್ಲಿ ಮಹಿಳೆಗೆ ಗೌರವ ಸ್ಥಾನಮಾನಗಳಿದ್ದವು. 1990ರ ಈಚೆಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಪುರುಷರ ಪ್ರಭಾವದಿಂದ ಸ್ವಲ್ಪ ತಗ್ಗಿತು. ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಅವುಗಳನ್ನು ಮಿರಿ ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹಗಳು ನಡೆಯುತ್ತಿವೆ.
ಇದು ಆಕೆಯ ಮನಸ್ಸು ಮತ್ತು ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಕ್ಷರಸ್ಥ ಕುಟುಂಬಗಳಲ್ಲಿ ಮಹಿಳಾ ಶೋಷಣೆ ತೀರಾ ಕಡಿಮೆ. ಶಿಕ್ಷಣದ ಕೊರತೆ ಇರುವ ಕಡೆ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿರುತ್ತವೆ. ಶಿಕ್ಷಣದಿಂದ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸ ಬಹುದಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ನಿಲ್ಲಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಮಹಿಳೆಯರನ್ನು ನೋಡುವ ಜನರ ಚಿಂತನೆ ಮತ್ತು ದೃಷ್ಠಿಕೋನ ಬದಲಾಗಬೇಕು.
ಮಹಿಳೆಯರಿಗೂ ಮುಕ್ತ ಅವಕಾಶ ಕಲ್ಪಿಸಿಕೊಟ್ಟಾಗ ದೇಶ ಅಭಿವೃದ್ಧಿ ಹೊಂದುತ್ತದೆ. ಮಹಿಲಾ ಸಬಲೀಕರಣಕ್ಕೆ ಅನೇಕ ಸಂಘ ಸಂಸ್ಥೆಗಳು ವೇದಿಕೆ ರೂಪಿಸಿವೆ. ಅಂತಹ ಸಂಸ್ಥೆಗಳಲ್ಲಿ ಸಂಚಲನ ಸಮನ್ವಯ ವೇದಿಕೆಯೂ ಒಂದು ಎಂದರು.
ಸಂವಾದದಲ್ಲಿ ಚರ್ಚೆ ಆಗಿದ್ದು: ಮಹಿಳೆಯರ ಸ್ವತಂತ್ರ ನಿರ್ಧಾರಗಳಿಗೆ ಕುಟುಂಬ ಗೌರವಿಸಬೇಕು. ಮಹಿಳೆಯ ಕೌಟುಂಬಿಕ ಕೊಡುಗೆ ಅನನ್ಯವಾದದ್ದು, ಕುಟುಂಬದಲ್ಲಿ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಸೇವಾ ಕ್ಷೇತ್ರಗಳಲ್ಲೂ ಅವಕಾಶ ಕಲ್ಪಿಸಿಕೊಡಬೇಕು.
ಮಹಿಳೆಯರು ಸ್ಥಳೀಯ ಸರ್ಕಾರಗಳಲ್ಲಿ ಮೀಸಲಾತಿಯಡಿ ಪಡೆದ ಅಕಾರವನ್ನು ಅವರ ಪತಿಯರೇ ಚಲಾಯಿಸುತ್ತಾರೆ. ಪುರುಷನಷ್ಟೇ ಸಮಾನ ಅವಕಾಶಗಳನ್ನು ಮಹಿಳೆಗೂ ನೀಡಬೇಕೆನ್ನುವ ವಿಚಾರಗಳು ಸಂವಾದ ಕಾರ್ಯಕ್ರಮದಲ್ಲಿ ಚರ್ಚೆಗೊಳಪಟ್ಟವು. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ವಿಜಯಮ್ಮ ಶಿವಲಿಂಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಚಲನ ಸಮನ್ವಯ ಸಂಸ್ಥೆಯ ಅಧ್ಯಕ್ಷೆ ಉಪಾಧ್ಯಕ್ಷೆ ರಾಣಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷೆ ಅನಿತಾ ಬಸವರಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ನಾಗಲಾಂಬಿಕೆ, ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಟಿ.ಬಸಪ್ಪ, ಉಪನ್ಯಾಸಕಿ ಎಸ್. ರೇಖಾ, ಶಿಕ್ಷಕಿ ಪರಮ್ಮ ಇತರರು ಇದ್ದರು.