ಹೊಸದುರ್ಗ: ವೇದಾವತಿ ನದಿ ಉಳಿವಿಗಾಗಿ ನದಿಪಾತ್ರದ ರೈತರೊಂದಿಗೆ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಜಾಥಾ ಆಯೋಜಿಸಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ ತಿಳಿಸಿದರು.
ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಏರ್ಪಡಿಸಿದ್ದ ರೈತರ ಸಮಸ್ಯೆಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಹೊಸದುರ್ಗದ ಕೊರಟಿಕೆರೆಯಿಂದ ಚಳ್ಳಕೆರೆ ಗಡಿಯವರೆಗೆ ಹರಿಯುತ್ತಿರುವ ವೇದಾವತಿ ನದಿ ಪಾತ್ರದ ರೈತರ ಉಳಿವಿಗಾಗಿ ಜಾಥಾ ನಡೆಸಲಾಗುವುದು. ನಂತರ ರೈತರ ಸಮಾವೇಶ ಮಾಡಿ ರೈತರ ಸಂಘಟನೆ ಮಾಡಲಾಗುವುದು ಎಂದರು.
ವೇದಾವತಿ ನದಿ ಉಳಿವಿಗಾಗಿ ರೈತರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಚಿಕ್ಕಮಗಳೂರಿನ ಕೆಲವು ಪ್ರದೇಶಗಳಲ್ಲಿ ಹರಿಯುವ ವೇದಾವತಿ ನೀರನ್ನು ತಡೆದು ನೀರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಡೆಯಲು ರೈತ ಸಂಘದ ಪ್ರಮುಖರು ಅಲ್ಲಿಗೆ ಹೋಗಿ ಹೋರಾಟ ಮಾಡಲಿದ್ದೇವೆ. ಅವರು ನೀರು ಹರಿಯಲು ಅವಕಾಶ ಮಾಡಿಕೊಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ವೇದಾವತಿ ನದಿ ಪಾತ್ರದಲ್ಲಿ ಕೆಲವಡೆ ಒತ್ತುವರಿಯಾಗುವುದನ್ನು ತಡೆಯಬೇಕು ಎಂದ ಸಿದ್ಧವೀರಪ್ಪ, ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಆಗುವ ಸಮಸ್ಯೆಗಳನ್ನು ತಪ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕೊರಟಿಕೆರೆ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಸಂಪನ್ಮೂಲ ಸಮಿತಿ ಸದಸ್ಯ ಎಂ.ಎಸ್. ಕರಿಸಿದ್ದಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಬಯಲಪ್ಪ, ತಾಲೂಕು ಕಾರ್ಯದರ್ಶಿ ಲಿಂಗಪ್ಪ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.