ಹೊಸದುರ್ಗ: ಜನಸಂಖ್ಯೆ ಕುರಿತ ಸರ್ಕಾರದ ಅಂಕಿ ಅಂಶಗಳು ನಿಖರವಾಗಿರುವುದಿಲ್ಲ. ಅವು ಮೋಸದಿಂದ ಕೂಡಿವೆ ಎಂದು ಹಿರಿಯ ಇತಿಹಾಸ ಸಂಶೋಧಕ ಪ್ರೊ| ಲಕ್ಷ್ಮಣ ತೆಲಗಾವಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕೃತಿ ಬಿಡುಗಡೆ ಸಮಾರಂಭದಲ್ಲಿ ಜಾನಪದ ಸಂಶೋಧಕ ಬಾಗೂರು ನಾಗರಾಜಪ್ಪ ರಚಿಸಿರುವ “ಹೊಸದುರ್ಗ ತಾಲೂಕು ಗೆಜೆಟಿಯರ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜನಸಂಖ್ಯೆ ಅಂಕಿ-ಅಂಶ ನಿರ್ದಿಷ್ಟವಾದುದಲ್ಲ. ಅದು ಬದಲಾಗುತ್ತಿರುತ್ತದೆ. ಆಯಾ ಸಮುದಾಯದವರು ಹೇಳುವ ಜನಸಂಖ್ಯಾ ಅಂಕಿ-ಅಂಶಗಳು ಸತ್ಯಾ ಸತ್ಯತೆಯಿಂದ ಕೂಡಿರುವುದಿಲ್ಲ. ಇಂಥವುಗಳನ್ನು ನ್ಯಾಯಾಲಯ ನಿರಾಕರಿಸುತ್ತದೆ. ಇನ್ನು ಸರ್ಕಾರದ ಅಂಕಿ-ಅಂಶಗಳಲ್ಲೂ ಸಾಕಷ್ಟು ಲೋಪಗಳಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ 18 ಲಕ್ಷ ಜನಸಂಖ್ಯೆಯ ಸಮುದಾಯವೊಂದಕ್ಕೆ 80 ಸಾವಿರ ಜನಸಂಖ್ಯೆ ತೋರಿಸಲಾಗಿದೆ. ನಿರ್ದಿಷ್ಟ ಅಂಕಿ-ಅಂಶ ತೋರಿಸಲಾಗದೇ ಇರುವುದರಿಂದ ಅನೇಕ ಸಮುದಾಯಗಳು ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ವಿಷಾದಿಸಿದರು.
ಬಾಗೂರು ನಾಗರಾಜಪ್ಪ ರಚನೆಯ ‘ಹೊಸದುರ್ಗ ತಾಲೂಕು ಗೆಜೆಟಿಯರ್’ ಹೊಸದುರ್ಗ ತಾಲೂಕಿನ ಸಾಂಸ್ಕೃತಿಕ ವೈಭವ ಹಾಗೂ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯ ಸಂಸ್ಕೃತಿ, ಚರಿತ್ರೆ, ಪರಂಪರೆ ಎಲ್ಲವನ್ನೂ ಕೃತಿ ಒಳಗೊಂಡಿದೆ. ತಾಲೂಕಿಗೆಇದೊಂದು ಅತ್ಯುತ್ತಮ ಕೊಡುಗೆಯಾಗಿದ್ದು, ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನದ ಕೃತಿಯಾಗಿದೆ. ಗ್ಯಾಜೆಟಿಯರ್ ರಚಿಸುವುದು ಕ್ಲಿಷ್ಟಕರ ಕೆಲಸ. ಗೆಜೆಟ್ ಗಳಲ್ಲಿ ಲೋಪಗಳಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಅದನ್ನು ರಚಿಸಲು ಸಾಕಷ್ಟು ಸಮಯ ಬೇಕು ಎಂದರು.
ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ನೆರಳಿರುವ ತಾಲೂಕು ಕಚೇರಿ ಆವರಣದಲ್ಲಿ ವೀರಸೌಧ ಸ್ಥಾಪನೆ ಮಾಡಲಾಗುವುದು. ಜತೆಗ ೆಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಫಿರಂಗಿಗಳು ಈ ಹಿಂದೆ ಹೊಸದುರ್ಗದಲ್ಲಿದ್ದವು. ಅವುಗಳನ್ನು ಮರಳಿ ತಾಲೂಕಿಗೆತರುವ ಪ್ರಯತ್ನ ನಡೆಸಲಾಗುವುದು ಎಂದು ಸಂಶೋಧಕ ಬಾಗೂರು ನಾಗರಾಜಪ್ಪ ಮಾಡಿದ ಮನವಿಗೆ ಸ್ಪಂದಿಸಿದರು.
ಜಾನಪದ ಸಂಶೋಧಕ ಬಾಗೂರು ನಾಗರಾಜಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್. ಬಿಲ್ಲಪ್ಪ ಮಾತನಾಡಿದರು. ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗೋ. ತಿಪ್ಪೇಶ್ ಇದ್ದರು. ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.