ಹೊಸದುರ್ಗ: ಪಟ್ಟಣದ ಕೋಟೆ ಬನಶಂಕರಿದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಬನದ ಹುಣ್ಣಿಮೆ ಅಂಗವಾಗಿ ಬನಶಂಕರಿದೇವಿ ದೇಗುಲದಲ್ಲಿ ಬೆಳಗ್ಗೆಯಿಂದಲೂ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಿವೇದನೆ, ಪುಣ್ಯಾಃ, ಕಳಶ ಪ್ರತಿಷ್ಠಾಪನೆ, ಹೋಮ ಹವನ, ಪೂರ್ಣಾಹುತಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯ ಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಶುಕ್ರವಾರ ಸಂಜೆ ತೆರೆದ ವಾಹನದಲ್ಲಿ ಅಲಂಕೃತ ಮುತ್ತಿನ ಪಲ್ಲಕ್ಕಿಗೆ ಬಣ್ಣ, ಬಣ್ಣದ ಹೂಗಳಿಂದ ಶೃಂಗಾರಗೊಳಿಸಿದ್ದ ಬನಶಂಕರಿ ಪ್ರತಿಮೆ ಪ್ರತಿಷ್ಠಾಪಿಸಲಾಯಿತು. ನಂತರ ಧೂಪಸೇವೆ, ಚಾಮರಸೇವೆ, ಮಣೇವು, ಗುಂಡಿನ ಚಾಟಿ, ಕತ್ತಿವರಸೆ, ಈಡುಗಾಯಿ ಸೇವೆ, ಮಹಾಮಂಗಳಾರತಿ ಪೂಜೆ ನೆರವೇರಿದವು. ಬಳಿಕ ಭಕ್ತರ ಬನಶಂಕರಿ ದೇವಿ ಉಘೇ, ಉಘೇ ಎಂಬ ಘೋಷಣೆ ಮೊಳಗಿತ್ತು.
ತಾಲೂಕು ಸಂಘದ ಅಧ್ಯಕ್ಷ ಗೋ.ತಿಪ್ಪೇಶ್, ದೇವಾಂಗ ಸಮಾಜದ
ಅಧ್ಯಕ್ಷ ಡಿ.ಆರ್.ಗೋವಿಂದರಾಜು, ಬನಶಂಕರಿ ಬ್ಯಾಂಕ್ ಅಧ್ಯಕ್ಷ ಡಿ.ಆರ್ .ನಾಗೇಶಪ್ಪ, ಉಪಾಧ್ಯಕ್ಷ ಚಿದಾನಂದ್, ಆಸಂದಿಪ್ರಕಾಶ್, ಗೌಡ್ರು ಶ್ರೀನಿವಾಸಯ್ಯ, ಬೊಮ್ಮಣ್ಣ, ಟಿ.ಮಂಜುನಾಥ್, ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ರಾಮಚಂದ್ರ, ರಾಮಚಂದ್ರಪ್ಪ, ಜ್ಯೋತಿ, ಗೀತಾ, ಸಪ್ತಗಿರಿ ಗುರು ಹಾಜರಿದ್ದರು.
ತಾಲೂಕಿನ ಇತಿಹಾಸ ಪ್ರಸಿದ್ಧ ನೀರಗುಂದ, ಬೆಲಗೂರು, ಶ್ರೀರಾಂಪುರ, ಹೊನ್ನೇನಹಳ್ಳಿ, ದೊಡ್ಡತೇಕಲವಟ್ಟಿ ಸೇರಿ ಇನ್ನಿತರ ಗ್ರಾಮಗಳಲ್ಲಿ ನೆಲೆಸಿರುವ ಬನಶಂಕರಿ ದೇವಿ ಆರಾಧಕರು ಬನದಹುಣ್ಣಿಮೆ ಹಬ್ಬ ಆಚರಿಸಿದರು.