Advertisement

ಹೊಸಂಗಡಿ- ಯಡಮೊಗೆ: ಪರ್ಯಾಯ ರಸ್ತೆಗೆ ತೇಪೆ ಕಾರ್ಯ

06:00 AM Jul 12, 2018 | Team Udayavani |

ಕುಂದಾಪುರ: ಹೊಸಬಾಳುವಿನಲ್ಲಿ ನಿರ್ಮಿಸಿದ ಮೋರಿ ಕುಸಿದ ಬಳಿಕ ಹೊಸಂಗಡಿ- ಯಡಮೊಗೆ ಸಂಪರ್ಕ ರಸ್ತೆ ಸ್ಥಗಿತಗೊಂಡಿದ್ದು, ಈಗ ಬದಲಿ ಮಾರ್ಗವಾಗಿ ಕೆರೆಕಟ್ಟು ರಸ್ತೆಯನ್ನು ಯಡಮೊಗೆ ನಿವಾಸಿಗಳು ಅವಲಂಬಿಸಿದ್ದು, ಹದಗೆಟ್ಟ ಈ ಕೆರೆಕಟ್ಟೆ ರಸ್ತೆಗೆ ಕಳೆದೆರಡು ದಿನಗಳಿಂದ ತೇಪೆ ಕಾರ್ಯ ನಡೆಯುತ್ತಿದೆ. 

Advertisement

ಸಂಪರ್ಕ ರಸ್ತೆಯೇ ಕಡಿತ
ಹೊಸಬಾಳು ಚಕ್ರ ನದಿಗೆ 40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಸಂಪೂರ್ಣ ಶಿಥಿಲಗೊಂಡ ಹಿನ್ನೆಲೆಯಲ್ಲಿ ಪರ್ಯಾಯವಾಗಿ 3.50 ಲಕ್ಷ ರೂ. ವೆಚ್ಚದಲ್ಲಿ ಮೋರಿ ನಿರ್ಮಿಸಲಾಗಿತ್ತು. ಆದರೆ ಅದು ಕಳಪೆ ಕಾಮಗಾರಿಗೆ ಈ ಬಾರಿಯ ಮೊದಲೆರಡು ಮಳೆಗೆ ಕೊಚ್ಚಿ ಹೋಗಿತ್ತು. ಆ ಬಳಿಕ ಹೊಸಬಾಳು ಮೂಲಕ ಯಡಮೊಗೆಯಿಂದ ಹೊಸಂಗಡಿ ಸಂಪರ್ಕ ರಸ್ತೆಯೇ ಕಡಿತಗೊಂಡಿತ್ತು. 

ಉದಯವಾಣಿ ವರದಿ
ಇದರಿಂದ ಯಡಮೊಗೆ ನಿವಾಸಿಗಳು ಹೊಸಂಗಡಿಗೆ ತೆರಳಲು ಬದಲಿ ಮಾರ್ಗವಾಗಿ ಕೆರೆಕಟ್ಟು ರಸ್ತೆಯನ್ನೇ ಅವಲಂಬಿಸಿದ್ದು, ಆದರೆ ಆ ರಸ್ತೆಯೂ ಸಂಪೂರ್ಣ ಹೊಂಡ – ಗುಂಡಿಗಳಿಂದಾಗಿ ಸಂಪೂರ್ಣ  ಹದಗೆಟ್ಟು ಹೋಗಿತ್ತು. ಈ ರಸ್ತೆಯಲ್ಲಿ ವಾಹನ ಸಂಚಾರವೇ ಸವಾಲಾಗಿತ್ತು. ಹೊಸಬಾಳು ಮೋರಿ ಕುಸಿತದ ಭೀತಿಯಿದ್ದು, ಪರ್ಯಾಯ ಮಾರ್ಗವಾದ ಕೆರೆಕಟ್ಟೆ ರಸ್ತೆ ದುರಸ್ತಿ ಪಡಿಸಿ ಎಂದು “ಉದಯವಾಣಿ’ ಜೂ. 9ರಂದು ವಿಶೇಷ ವರದಿ ಪ್ರಕಟಿಸಿತ್ತು. 


ಬಸ್‌ ಸಂಚಾರವೂ ಆರಂಭ
ಯಡಮೊಗೆಯಿಂದ ಸುಮಾರು 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಿದ್ದಾಪುರ, ಹೊಸಂಗಡಿ, ಶಂಕರನಾರಾಯಣ, ಕುಂದಾಪುರ ಕಡೆಯ ಕಾಲೇಜುಗಳಿಗೆ ವ್ಯಾಸಂಗಕ್ಕೆ ತೆರಳುತ್ತಾರೆ. ಈಗ ಹೊಸಬಾಳು ಮೋರಿ ಮುರಿದು ಬಿದ್ದಿದ್ದರಿಂದ ಸರಕಾರಿ ಬಸ್‌  ಹಾಗೂ ಖಾಸಗಿ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೀಗ ಪರ್ಯಾಯ ಮಾರ್ಗವಾದ ಕೆರೆಕಟ್ಟೆ ರಸ್ತೆಗೆ ತೇಪೆ ಹಾಕಿದ್ದರಿಂದ ಬಸ್‌ಗಳ ಸಂಚಾರವೂ ಆರಂಭಗೊಂಡಿದೆ. 

ಸ್ಪಂದಿಸಿದ ಡಿಸಿ
ರಸ್ತೆ ದುರಸ್ತಿಗೆ ಸ್ಪಂದಿಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಪರ್ಯಾಯ ಮಾರ್ಗವಾಗಿರುವ ಕೆರೆಕಟ್ಟೆ ರಸ್ತೆಗೆ ವೇಟ್‌ ಮಿಕ್ಸ್‌ ಹಾಕಿ, ಹೊಂಡ – ಗುಂಡಿಗಳನ್ನು ಮುಚ್ಚಲು ಡಿಸಿಯವರು ಆದೇಶ ನೀಡಿದ್ದಲ್ಲದೆ, ಒಟ್ಟು 3 ಬಾರಿ ದುರಸ್ತಿ ಕಾರ್ಯ ಮಾಡುವಂತೆಯೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಕಳೆದೆರಡು ದಿನಗಳಿಂದ ರಸ್ತೆಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next