ಹೊಸದುರ್ಗ: ತಾಲೂಕಿನಲ್ಲಿರುವ 36 ಮದ್ಯದ ಅಂಗಡಿಗಳಲ್ಲಿನ ದಾಸ್ತಾನನ್ನು ಅಧಿಕಾರಿಗಳ ತಂಡ ಮಾಡಿಕೊಂಡು ಪರಿಶೀಲನೆ ನಡೆಸಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಗೂಳಿಹಟ್ಟಿ ಶೇಖರ್ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ತಾಲೂಕಿನಲ್ಲಿ ಕೊರೋನಾ ವೈರಸ್ ನಿಯಂತ್ರಣ ಮಾಡಲು ಲಾಕ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯದ ಹಾವಳಿಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಆದ್ದರಿಂದ ದಾಸ್ತಾನನ್ನು ಪರಿಶೀಲಿಸಿ ಎಂದರು.
ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಮದ್ಯದ ಅಂಗಡಿಗಳ ದಾಸ್ತಾನು ಪರಿಶೀಲಿಸಿ ವರದಿ ಮಾಡಲಾಗಿದೆ. ಎಲ್ಲಿಯೂ ಅಕ್ರಮ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನೀಡಿದರು. ಪಟ್ಟಣದಲ್ಲಿ ಬೆಳಗಿನ ಮಾರುಕಟ್ಟೆ ಬೇಗ ಮುಗಿಯುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಮಸ್ಯೆಯಾಗಬಹುದು ಎಂದು ಶಾಸಕರು ಹೇಳಿದರು. ಪಟ್ಟಣದಲ್ಲಿ ವಾರ್ಡ್‌ವಾರು, ಗ್ರಾಮೀಣ ಪ್ರದೇಶಗಳಲ್ಲಿ ತೆರಳಿ ಮಾರುವ ವ್ಯಾಪಾರಸ್ಥರು ಹೋಲ್ ಸೇಲ್ ದರದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಎಸ್‌ಐ ಶಿವಕುಮಾರ್ ಹಾಗೂ ಪಪಂ ಮುಖ್ಯಾಧಿಕಾರಿ ತಿಮ್ಮರಾಜು ತಿಳಿಸಿದರು.
ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರ ನೀಡಲು ಏನು ಕ್ರಮ ಕೈಗೊಂಡಿದ್ದೀರಾ ಎಂಬ ಶಾಸಕರ ಪ್ರಶ್ನೆಗೆ ತಹಶೀಲ್ದಾರ್ ತಿಪ್ಪೇಸ್ವಾಮಿ ಉತ್ತರಿಸಿ ರೇಷನ್ ಕಾರ್ಡ್ ಇಲ್ಲದವರನ್ನು ಗುರುತಿಸಿ ಪಡಿತರ ನೀಡಲಾಗುತ್ತಿದೆ ಎಂದರು. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಗುಟಕಾ, ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಹಾಗೂ ಬೇಕರಿಯಲ್ಲಿ ಹೊಸದಾಗಿ ತಯಾರಿಸಿದ ಪದಾರ್ಥಗಳ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚನೆ ನೀಡಿದರು.